ಬೆದರಿಕೆ ಕರೆಯತ್ತ ಇರಲಿ ಎಚ್ಚರ : ಡಿವೈಎಸ್‌ಪಿ ಡಾ.ಗಾನಾ ಸಲಹೆ

sabhe
Published on

ಮೂಲ್ಕಿ: ಸರ್ಕಾರಿ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಬೆದರಿಕೆ ಕರೆಗಳ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕಾಗಿದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಇಲಾಖೆಯನ್ನು ಸಂಪರ್ಕಿಸಿ ಎಂದು ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ಸಲಹೆ ನೀಡಿದರು.

ಬುಧವಾರ ಮೂಲ್ಕಿ ಕಾರ್ನಾಡು ಬಂಟರ ಭವನದಲ್ಲಿ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಮುಕ್ಕ ಬಳಿ ಸುಮಾರು 10 ಮನೆಗಳಿಗೆ ಮೂಲ ಸೌಕರ್ಯ ಒದಗಿಸುವ ಬಗ್ಗೆ ಅಧಿಕಾರಿಗಳ ನಿರ್ಲಕ್ಷೃ, ಜಾಗದ ತಕರಾರು, ಮುಲ್ಕಿ ಬಸ್ ನಿಲ್ದಾಣದ ಖಾಸಗಿ ಹೋಟೆಲ್‌ಗೆ ಸಂಬಂಧಿಸಿದ ವಿದ್ಯುತ್ ಪ್ರವರ್ತಕವನ್ನು ಸರ್ಕಾರಿ ಜಾಗದಲ್ಲಿ ಅಳವಡಿಕೆ ಸಹಿತ ಸಾರ್ವಜನಿಕ ಹಿತಾಸಕ್ತಿಯ ದೂರುಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನಿಸಲಾಯಿತು.

ತಾಲೂಕು ವ್ಯಾಪ್ತಿಯ ಉಳೆಪಾಡಿ, ಬಳ್ಕುಂಜೆ ಶಾಂಭವಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಮೂಲ್ಕಿ ಒಳ ರಸ್ತೆಯ ಮಟ್ಟು, ಫಲಿಮಾರು ಮೂಲಕ ಕಳ್ಳ ದಾರಿಯಲ್ಲಿ ಉಡುಪಿ ಜಿಲ್ಲೆಗೆ ಟಿಪ್ಪರ್‌ನಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಅದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದರು.ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಡಾ.ಗಾನಾ ಪಿ.ಕುಮಾರ್ ಭರವಸೆ ನೀಡಿದರು.

ಅಧಿಕಾರಿಗಳಾದ ಚಂದ್ರಶೇಖರ ಕೆ.ಎನ್., ಚಂದ್ರಶೇಖರ ಸಿಎಲ್, ಮೂಲ್ಕಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಇಒ ಕುಸುಮಾಧರ, ಉಪತಹಸೀಲ್ದಾರ್ ದಿಲೀಪ್ ರೋಡ್ಕರ್, ನಪಂ ಮುಖ್ಯಾಧಿಕಾರಿ ಮಧುಕರ್, ಕಿನ್ನಿಗೋಳಿ ಪಪಂ ಮುಖ್ಯಾಧಿಕಾರಿ ಇಂದು ಎಂ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net