

ಸುಳ್ಯ: ಸ್ಕೂಟಿ ಸ್ಕಿಡ್ ಆದ ಪರಿಣಾಮವಾಗಿ ಯುವಕನೋರ್ವ ಬಿದ್ದು ಗಾಯಗೊಂಡಿದ್ದು, ಯುವಕ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಲೆಂದು ಕಾರು ಚಾಲಕ ಬ್ರೇಕ್ ಹಾಕಿದ ವೇಳೆ ಹಿಂಬದಿಯಿಂದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಪೆರಾಜೆಯಲ್ಲಿ ಶನಿವಾರ ಸಂಭವಿಸಿದೆ. ಅರಂತೋಡಿನ ಯುವಕ ಸುಳ್ಯದಿಂದ ಅರಂತೋಡಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಪೆರಾಜೆ ಪೆಟ್ರೋಲ್ ಪಂಪ್ ಬಳಿ ಸ್ಕೂಟಿ ಸ್ಕಿಡ್ ಆಗಿ ಪಲ್ಟಿಯಾಗಿದೆ. ಯುವಕ ರಸ್ತೆಗೆ ಎಸೆಯಲ್ಪಟ್ಟು ಕೈಗೆ ಗಾಯವಾಗಿದೆ. ಬೈಕ್ ಹಾಗೂ ಕಾರು ನಜ್ಜುಗುಜ್ಜಾಗಿದೆ.
*ಪಾಲಡ್ಕದಲ್ಲಿ ಸವಾರನಿಗೆ ಗಂಭೀರ ಗಾಯ: ಸ್ಕೂಟಿಯೊಂದು ಸ್ಕಿಡ್ ಆಗಿ ಪಲ್ಟಿಯಾದ ಪರಿಣಾಮವಾಗಿ, ಪೆರಾಜೆಯ ಯುವಕನೋರ್ವ ಮುಖಕ್ಕೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅರಂಬೂರಿನ ಪಾಲಡ್ಕದಲ್ಲಿ ಅ.11ರಂದು ಸಂಭವಿಸಿದೆ. ಪೆರಾಜೆ ಗ್ರಾಮದ ಕೊಳಂಗಾಯ ವೇದಾವತಿ ಎಂಬುವರ ಪುತ್ರ ಜೀವಿತ್ ರಾತ್ರಿ ಸುಳ್ಯಕ್ಕೆ ಸ್ಕೂಟಿಯಲ್ಲಿ ಬಂದು ಮರಳಿ ಮನೆಗೆ ಹೋಗುತ್ತಿದ್ದ ವೇಳೆ ಅರಂಬೂರಿನ ಪಾಲಡ್ಕದಲ್ಲಿ ಸ್ಕೂಟಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಪಲ್ಟಿಯಾಗಿದೆ. ಜೀವಿತ್ ಡಾಂಬರು ರಸ್ತೆಗೆ ಎಸೆಯಲ್ಪಟ್ಟು, ಮುಖಕ್ಕೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.