

ಬೆಳ್ತಂಗಡಿ: ಚರಂಡಿ ಕೆಲಸದಲ್ಲಿ ನಡೆದ ಲಕ್ಷಾಂತರ ರೂಪಾಯಿ ಅವ್ಯಹಾರ ಪ್ರಕರಣ ಸಂಬಂಧ ಇಂದಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಎರಡು ದಿನಗಳಿಂದ ಬೆಂಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದಾರೆ.
2021-22ರಲ್ಲಿ ಚರಂಡಿ ಕೆಲಸದಲ್ಲಿ 30 ಲಕ್ಷ ಟೂ.ಅವ್ಯಹಾರ ನಡೆಸಲಾಗಿದೆ. ಚರಂಡಿ ಕೆಲಸವನ್ನು ಶೇಕಡ 20ರಷ್ಟು ನಡೆಸಿಲ್ಲ ಎಂದು ಈ ಹಿಂದೆ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಪಿಡಿಒ ಸವಿತಾ, ಗ್ರಾ.ಪಂ ಅಧ್ಯಕ್ಷ ಅಡಿಲು ಅನಂದ, ಇಂಜಿನಿಯರ್ ಹರ್ಷಿತ್ ವಿರುದ್ಧ ಸ್ಥಳೀಯ ನಿವಾಸಿ ಜಯರಾಮ್ ಗೌಡ ಬಂಗಾಡಿ 2023ರ ಜೂನ್‌ನಲ್ಲಿ ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಆತರಿಕ ತನಿಖೆ ನಡೆಸುತ್ತಿದ್ದ ಪ್ರಕಾಶ್ ಬಣಕಾರ್ ಮತ್ತು ಸಹಾಯಕ ಇಂಜಿನಿಯರ್ ತೇಜಶ್ರೀ ಮತ್ತು ಮಂಗಳೂರು ಲೋಕಾಯುಕ್ತ ಕಚೇರಿ ಸಿಬ್ಬಂದಿ ಈಗ ಇಂದಬೆಟ್ಟು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ದೂರುದಾರ ಜಯರಾಮ್ ಬಂಗಾಡಿ ಜತೆ ಚರಂಡಿ ಕೆಲಸಗಳನ್ನು ವೀಕ್ಷಿಸಿ ಮಹಜರು ಮಾಡಿದ್ದಾರೆ.