ಲಂಚ ಪಡೆಯುವಾಗ‌ ಸಿಕ್ಕಿ ಬಿದ್ದ ಪಪಂ ಸದಸ್ಯನಿಗೆ ಜೈಲು

jaill
Published on

ಕಾರವಾರ: ಅತಿಕ್ರಮಣ ತೆರವು ಮಾಡದೇ ಬಿಡಲು ಮನೆಯ ಮಾಲೀಕನಿಂದ 4,500 ರೂ. ಲಂಚ ಪಡೆದ ಪಟ್ಟಣ ಪಂಚಾಯಿತಿ ಸದಸ್ಯ ಈಗ ಜೈಲು ಕಂಬಿ ಎಣಿಸುವಂತಾಗಿದೆ.
ಲಂಚ ಪಡೆಯುವ ವೇಳೆ ಲೋಕಾಯುಕ್ತ ದಾಳಿಯಿಂದ ಬಂಧಿತನಾಗಿದ್ದ ಯಲ್ಲಾಪುರ ಪಟ್ಟಣ ಪಂಚಾಯಿತಿಯ 5 ನೇ ವಾರ್ಡ್ ಸದಸ್ಯನಾಗಿದ್ದ ನಾಯ್ಕನಕೆರೆ ಸಮೀಪದ ನಿವಾಸಿ ರವಿ ಸೋಮಯ್ಯ ದೇವಾಡಿಗನಿಗೆ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನರಸಿಂಹ ವೆಂಕರಮಣ ಭಟ್ಟ ಅವರ ಯಲ್ಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಟಗಾರ ರಸ್ತೆಯ ಮನೆಯ ಎದುರು ಪಪಂ ಅನುದಾನದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿತ್ತು. ನಿಯಮದಂತೆ ಚರಂಡಿ ನಿರ್ಮಾಣ ಮಾಡಲು ನರಸಿಂಹ ಭಟ್ಟ ಅವರು ಅತಿಕ್ರಮಿಸಿ ನಿರ್ಮಿಸಿದ ಮನೆಯ ಗೋಡೆಯನ್ನು ಒಡೆಯಬೇಕಾಗುತ್ತದೆ ಎಂದು ಗುತ್ತಿಗೆದಾರ ಹೇಳಿದ್ದ. ಗೋಡೆ ಒಡೆಯದಂತೆ ಕಾಮಗಾರಿ ಮಾಡಿಕೊಡುವಂತೆ ನರಸಿಂಹ ಭಟ್ಟ ಅವರು ಆಗಿನ ಪಪಂ ಸದಸ್ಯ ರವಿ ದೇವಾಡಿಗ ಬಳಿ ಮನವಿ ಮಾಡಿದಾಗ ರವಿ 10 ಸಾವಿರ ರೂ. ಲಂಚ ಕೇಳಿದ್ದ. ನಂತರ 2010 ರ ಅಕ್ಟೋಬರ್ 12 ರಂದು 4,500 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಲೋಕಾಯುಕ್ತ ಪೊಲೀಸರು ಹಣದೊಂದಿಗೆ ರವಿ ದೇವಾಡಿಗನ್ನು ಬಂಧಿಸಿದ್ದರು. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೊಂಡ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ 4,500 ರೂ.ಗಳನ್ನು ದೂರುದಾರರಿಗೆ ಮರಳಿಸುವಂತೆ ಸೂಚಿಸಿದ್ದಾರೆ. ಲೋಕಾಯಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ಎಂ.ಪ್ರಭು ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net