

ಬೆಂಗಳೂರು: ಸುವರ್ಣ ಸಂಭ್ರಮದಲ್ಲಿರುವ ‘ರಂಗ ಸಂಪದ’ ಸಂಸ್ಥೆ, ನೂರು ವರ್ಷಗಳ ಸಾಹಿತ್ಯವೊಂದನ್ನು ರಂಗಕ್ಕೆ ತರುವ ಪ್ರಯತ್ನ ಮಾಡಿದ್ದು, ಆ.26 ಮತ್ತು 27ರಂದು ‘ಲೋಕದ ಒಳಹೊರಗೆ’ ಹೆಸರಿನಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಕಲಾಗ್ರಾಮದಲ್ಲಿ ಎರಡು ದಿನಗಳ ಕಾಲ ನಿತ್ಯ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನಗೊಳ್ಳಲಿದ್ದು. ರವೀಂದ್ರನಾಥ್ ಠಾಗೋರ್ ಅವರ ‘ಘರೇ ಬೈರೇ’ ಕಾದಂಬರಿ ಆಧರಿಸಿದ ನಾಟಕಕ್ಕೆ ಬಿ. ಸುರೇಶ್ ನಿರ್ದೇಶನವಿರಲಿದೆ.
‘ಘರೇ ಬೈರೇ’ ಕೃತಿಯಲ್ಲಿ ಒಂದು ಕುಟುಂಬದೊಳಗೆ ಆಗುವ ಘಟನೆಗಳ ಮೂಲಕವೇ ಒಂದು ದೇಶದೊಳಗೆ ಆಗುವ ತಲ್ಲಣಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಬಾಂಗ್ಲಾದೇಶ ವಿಭಜನೆಗೆ ವಿರುದ್ಧವಾಗಿ 1905ರಲ್ಲಿ ಆರಂಭವಾದ ಸ್ವದೇಶಿ ಆಂದೋಲನ ಕುರಿತು ಹಲವು ಪ್ರಶ್ನೆಗಳನ್ನು ಲೇಖಕರು ಜನರ ಮುಂದಿಟ್ಟಿದ್ದಾರೆ.
ಸಿದ್ಧಾರ್ಥ ಪಾಶ್ಚಾತ್ಯ ಆಲೋಚನೆಯನ್ನು ಮೆಚ್ಚಿಕೊಳ್ಳುವವ, ಇಂದ್ರಜಿತ್ ಆ ಸಂಸ್ಕೃತಿಯ ವಿರುದ್ಧ ಬಂಡೆದ್ದವ. ಅವರಿಬ್ಬರ ನಡುವೆ ಸಿಕ್ಕಿಬಿದ್ದ ಶಾರದೆ ಎಂಬ ಅಮಾಯಕಿ ಅನುಭವಿಸುವ ಉಬ್ಬರವಿಳಿತಗಳು ನಾಟಕದ ತಿರುಳು. ಎಲ್ಲವೂ ರಮ್ಯವಾಗಿದೆ ಎನಿಸುವಂತಿದ್ದ ಸಂಸಾರದ ಒಳಗೆ ಪ್ರವೇಶಿಸುವ ಘರ್ಷಣೆಗಳು ಕೇವಲ ಆ ಕುಟುಂಬವನ್ನು ಮಾತ್ರವಲ್ಲ, ಸುತ್ತಲ ಸಮಾಜವನ್ನು ಹೇಗೆ ವಿಘಟಿಸುತ್ತ ಹೋಗುತ್ತವೆ ಎಂಬುದನ್ನು ಅನಾವರಣಗೊಳಿಸಲಾಗಿದೆ.