ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಆರೋಪ ಕೆಆರ್ ಐಡಿಎಲ್ ಇಇ ಕಚೇರಿ ಮೇಲೆ ಲೋಕಾ ದಾಳಿ

IMG-20240109-WA0095.jpg
Published on

ರಾಮನಗರ: ನಗರದಲ್ಲಿರುವ ಕೆ‌ಆರ್‌ಐಡಿಎಲ್ ವಿಭಾಗೀಯ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು, ಮಂಗಳವಾರ ದಾಳಿ ನಡೆಸಿದ್ದಾರೆ.

ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯದ್ ಮುನೀರ್ ಅಹಮದ್ ಅವರ ಕೊಠಡಿಯಲ್ಲಿ ಶೋಧ ಕಾರ್ಯ ನಡೆಸಿದರು.

ಮಂಗಳವಾರ ಬೆಳಿಗ್ಗೆ 10.15ರ ಸುಮಾರಿಗೆ ಬೆಂಗಳೂರಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜು ಬಿ.ಪಿ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಕಚೇರಿಯಲ್ಲಿ ಒಬ್ಬರು ಬಿಟ್ಟರೆ ಉಳಿದಂತೆ ಯಾರೂ ಕಚೇರಿಯಲ್ಲಿರಲಿಲ್ಲ. ದಾಳಿಯ ವಿಷಯ ತಿಳಿದು ಕೆಲವರು 11 ಗಂಟೆ ನಂತರ ಕಚೇರಿಗೆ ಬಂದಿದ್ದಾರೆ.

ವರ್ಷದ ಹಿಂದೆ ರಾಮನಗರಕ್ಕೆ ವರ್ಗಾವಣೆಯಾಗಿದ್ದ ಮುನೀರ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿದೆ

ಈ ಹಿನ್ನಲೆಯಲ್ಲಿ ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರ ತಂಡವೊಂದು ದಾಳಿ ನಡೆಸಿತ್ತು. ಮತ್ತೊಂದು ತಂಡ, ಮುನೀರ್ ಕಾರ್ಯನಿರ್ವಹಿಸುವ ರಾಮನಗರದ ಕಚೇರಿ ಮೇಲೆ ದಾಳಿ ನಡೆಸಿದೆ.

ಕಚೇರಿಯಲ್ಲಿ ಮುನೀರ್ ಅವಧಿಯಲ್ಲಿ ಆಗಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ನಡೆಸಲಾಗಿದೆ. ಅವರಿಗೆ ಆಪ್ತವಾದ ಕೆಲ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net