

ಸುಳ್ಯ: ಸುಳ್ಯ ನ್ಯಾಯಾಲಯದಲ್ಲಿ ಶನಿವಾರ ನ್ಯಾಯಾಧೀಶರ ನೇತೃತ್ವದಲ್ಲಿ ಲೋಕ ಅದಾಲತ್ ನಡೆದಿದ್ದು, ಎರಡು ನ್ಯಾಯಾಲಯದ ಅದಾಲತ್‌ನಲ್ಲಿ ಒಟ್ಟು 499 ಪ್ರಕರಣಗಳ ಪೈಕಿ 345 ಪ್ರಕರಣಗಳು ಇತ್ಯರ್ಥಗೊಂಡವು.
ಹತ್ತು ವರ್ಷಗಳ ಹಿಂದಿನಿಂದ ಪರಿಹಾರ ಕಾಣದೆ ಬಾಕಿಯಿದ್ದ ಪ್ರಕರಣಗಳೂ ಇತ್ಯರ್ಥಗೊಂಡಿವೆ. ರಾಜಿಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಿರುವ ಹಲವಾರು ಪ್ರಕರಣಗಳನ್ನು ಯಾವುದೇ ಶುಲ್ಕ, ಖರ್ಚುವೆಚ್ಚವಿಲ್ಲದೆ ಲೋಕ ಅದಾಲತ್‌ನಲ್ಲಿ ಸರಿಪಡಿಸಿಕೊಂಡರು. ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ಕಾರ್ಮಿಕ, ವೇತನ, ವಿದ್ಯುತ್, ನೀರು, ಮೋಟಾರು ವಾಹನ ಪ್ರಕರಣ, ಕೌಟುಂಬಿಕ ಸಮಸ್ಯೆ, ಪತಿ-ಪತ್ನಿ ಸಮಸ್ಯೆ ಪ್ರಕರಣ, ಜಾಗದ ತಕರಾರು ಸೇರಿದಂತೆ ರಾಜಿಯಲ್ಲಿ ಇತ್ಯರ್ಥ ಪಡಿಸಲು ಸಾಧ್ಯವಿರುವ ಇತರ ಸೇವಾ ಶುಲ್ಕದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶ ನೀಡಲಾಗಿತ್ತು. ಗಂಭೀರ ಸ್ವರೂಪದ ಅಪರಾಧಿಕ ಪ್ರಕರಣಗಳನ್ನು ಹೊರತುಪಡಿಸಿ ಇತರ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳ ಕಕ್ಷಿದಾರರಿಗೆ ನೇರವಾಗಿ ಅಥವಾ ವಕೀಲರ ಮೂಲಕ ಅದಾಲತ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಜೆಎಂಎಫ್‌ಸಿ ಹಿರಿಯ ನ್ಯಾಯಾಲಯದಲ್ಲಿ ನ್ಯಾಯಧೀಶ ಬಿ.ಮೋಹನ್ ಬಾಬು ನೇತೃತ್ವದಲ್ಲಿ 146 ಕ್ರಿಮಿನಲ್ ಪ್ರಕರಣಗಳಲ್ಲಿ 5,42,768 ರೂ. ಹಾಗೂ 16 ಸಿವಿಲ್ ಪ್ರಕರಣಗಳಲ್ಲಿ 31,63,101 ರೂ.ಗಳಲ್ಲಿ ಇತ್ಯರ್ಥ ಮೂಲಕ ಒಟ್ಟು 162 ಪ್ರಕರಣ ಇತ್ಯರ್ಥವಾದರೆ, ಸಿವಿಲ್ ನ್ಯಾಯಾಲಯದ ನ್ಯಾಯಧೀಶೆ ಅರ್ಪಿತಾ ನೇತೃತ್ವದಲ್ಲಿ 165 ಕ್ರಿಮಿನಲ್ ಪ್ರಕರಣಗಳಲ್ಲಿ 32,66,799 ರೂ. 18 ಸಿವಿಲ್ ಪ್ರಕರಣದಲ್ಲಿ 6,30,033 ರೂ ಗಳ ಮೂಲಕ ಒಟ್ಟು 183 ಪ್ರಕರಣಗಳು ಇತ್ಯರ್ಥಗೊಂಡವು.
ಕಲಾಪದಲ್ಲಿ ಹಿರಿಯ ನ್ಯಾಯಾಲಯದಲ್ಲಿ ಸಂಧಾನಕರಾಗಿ ವಕೀಲ ಅಶ್ವಿನ್ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ವಕೀಲ ದಿನೇಶ್ ಎನ್.ಭಾಗವಹಿಸಿದ್ದರು. ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ನ್ಯಾಯಾಲಯದ ಸಿಬ್ಬಂದಿ ಸಹಕರಿಸಿದರು.