ಕೇಸರಿ ಇರಲಿದೆ ಸಾಕಷ್ಟು ಅಚ್ಚರಿ: ಬಿಜೆಪಿಯ 2ನೇ ಪಟ್ಟಿ ಇಂದು, ರಾಜ್ಯದ 17 ಹುರಿಯಾಳುಗಳು ಫೈನಲ್

BJP Congress
Published on

ನವದೆಹಲಿ: ಲೋಕಸಭೆ ಚುನಾವಣೆ ಸಂಬಂಧ ದೆಹಲಿಯಲ್ಲಿ ಅಭ್ಯರ್ಥಿಗಳ 2ನೇ ಪಟ್ಟಿ ಸಿದ್ಧಪಡಿಸಿರುವ ಬಿಜೆಪಿ ಕರ್ನಾಟಕದ 15-17 ಸ್ಥಾನಗಳೂ ಸೇರಿದಂತೆ ಮಂಗಳವಾರವೇ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ರಾಜ್ಯ ಬಿಜೆಪಿ ನಾಯಕರು ಎಲ್ಲಾ 28 ಕ್ಷೇತ್ರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ವರಿಷ್ಠರೇ ಅಂತಿಮ: ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಸಮಸ್ಯಾತ್ಮಕ ಅಲ್ಲದ 15ರಿಂದ 17 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಹಲವು ಮಹತ್ವದ, ಅಚ್ಚರಿ ಬದಲಾವಣೆಗಳನ್ನು ವರಿಷ್ಠರೇ ಕೈಗೊಳ್ಳುವ ಸಾಧ್ಯತೆ ಗೋಚರಿಸಿದೆ. ಹಾಗೆಯೇ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲು ತೀರ್ವನಿಸಲಾಗಿದೆ. ಅಭ್ಯರ್ಥಿ ಆಯ್ಕೆ ವೇಳೆ 28 ಕ್ಷೇತ್ರಗಳಿಗೆ ಕಾಂಗ್ರೆಸ್​ನ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಮುಂದಿಟ್ಟು ಸಮಾಲೋಚನೆ ನಡೆಸಲಾಗಿದೆ.

ರಾಜ್ಯದ ಕೇಂದ್ರ ಸಚಿವರಲ್ಲಿ ಪ್ರಲ್ಹಾದ್ ಜೋಶಿಯವರಿಗೆ ಹುಬ್ಬಳ್ಳಿ-ಧಾರವಾಡ ಬಹುತೇಕ ಖಚಿತವಾಗಿದ್ದರೆ, ಸಚಿವ ನಾರಾಯಣ ಸ್ವಾಮಿ ಪ್ರತಿನಿಧಿಸುವ ಚಿತ್ರದುರ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ವಿರೋಧ ಎದುರಿಸುತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಹೇಗೆ ಎಂಬ ಮಾತುಕತೆ ನಡೆದಿದೆ. ಅಂತಿಮವಾಗಿ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲೇ ಮುಂದುವರಿದರೂ ಅಚ್ಚರಿ ಇಲ್ಲ. ಆದರೆ, ವರಿಷ್ಠರು ಬೇರೆ ಕ್ಷೇತ್ರದ ಬಗ್ಗೆ ಯೋಚಿಸಿರುವುದು ಕುತೂಹಲ ಕೆರಳಿಸಿದೆ. ಈ ಬಗ್ಗೆ ನಾವೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ನಾಯಕರಿಗೆ ವರಿಷ್ಠರು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ.

ಬೀದರ್ ಜಿಲ್ಲೆಯಲ್ಲಿ ಶಾಸಕರು, ಮುಖಂಡರ ವಿರೋಧಕ್ಕೆ ಗುರಿಯಾಗಿರುವ ಭಗವಂತ್ ಖೂಬಾಗೆ ಮತ್ತೊಮ್ಮೆ ಅವಕಾಶ ನೀಡಬೇಕೆ ಬೇಡವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಅನುಮಾನ ಎನ್ನಲಾಗಿದ್ದು, ಯದುವೀರ ಒಡೆಯರ್ ಹೆಸರು ಚರ್ಚೆಯಾಗಿದೆ. ರಾಜ್ಯ ನಾಯಕರು ಯದುವೀರ್ ಹೆಸರನ್ನು ವರಿಷ್ಠರ ಮುಂದಿಟ್ಟಿದ್ದಾರೆ ಮತ್ತು ಪ್ರತಾಪ್ ಸಿಂಹ ಯಾವ ಕಾರಣಕ್ಕಾಗಿ ವಿರೋಧ ಎದುರಿಸುತ್ತಿದ್ದಾರೆ ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

ಕಳೆದ 3 ಅವಧಿಗಳಿಂದ ಸಂಸದರಾಗಿರುವ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಚಾರದಲ್ಲೂ ಸಾಕಷ್ಟು ಚರ್ಚೆ ನಡೆದಿದೆ. ಹೊಸ ಮುಖಗಳ ಚರ್ಚೆ ಸಂದರ್ಭದಲ್ಲಿ ಬಂಟ ಸಮುದಾಯದ ಕ್ಯಾಪ್ಟನ್ ಬೃಜೇಶ್ ಚೌಟ ಹೆಸರು ಮುನ್ನೆಲೆಗೆ ಬಂದಿದೆ. ಬಹುರ್ಚಚಿತ ಹಾವೇರಿ ಟಿಕೆಟ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ನೀಡಬೇಕು ಎಂದು ರಾಜ್ಯ ನಾಯಕರು ತಿಳಿಸಿದ್ದಾರೆ. ಹಾವೇರಿ ಈ ಬಾರಿ ಸವಾಲಿನ ಕ್ಷೇತ್ರವಾಗಿದ್ದು, ಗೆಲ್ಲಬೇಕೆಂದರೆ ಬೊಮ್ಮಾಯಿ ಅವರಿಗೆ ನೀಡಬೇಕು ಎಂದು ವರಿಷ್ಠರಿಗೆ ವಿವರಿಸಲಾಗಿದೆ.

ಉತ್ತರ ಕನ್ನಡ ಕ್ಷೇತ್ರದಿಂದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪುವುದು ಖಚಿತ ಎನ್ನಲಾಗಿದ್ದರೂ, ಇಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಬಳ್ಳಾರಿ ಕ್ಷೇತ್ರದಿಂದ ಹಾಲಿ ಸಂಸದ ದೇವೇಂದ್ರಪ್ಪ ಬದಲು ಮಾಜಿ ಸಚಿವ ಬಿ. ಶ್ರೀರಾಮುಲುಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ. ರಾಜ್ಯ ನಾಯಕರೂ ಶ್ರೀರಾಮುಲು ಹೆಸರು ಪ್ರಸ್ತಾಪಿಸಿದ್ದಾರೆ. ಕಳೆದ ಸಭೆಯಲ್ಲಿ ಚಿಕ್ಕಬಳಾಪುರ ಕ್ಷೇತ್ರಕ್ಕೆ ಮಾಜಿ ಸಚಿವ ಡಾ. ಸುಧಾಕರ್​ಗೆ ನೀಡುವ ಬಗ್ಗೆ ಚರ್ಚೆಯಾಗಿತ್ತು. ಈ ಕ್ಷೇತ್ರದ ಬಗ್ಗೆ ನಿರ್ಧಾರ ಇನ್ನೂ ಆಗಿಲ್ಲ ಎನ್ನಲಾಗಿದೆ.

ಟಿಕೆಟ್ ಸಸ್ಪೆನ್ಸ್

* ಸಮಸ್ಯೆ ಇಲ್ಲದ 15-17 ಕ್ಷೇತ್ರಗಳ ಅಭ್ಯರ್ಥಿ ಫೈನಲ್

* 28 ಕ್ಷೇತ್ರಗಳ ಸಂಭ ವನೀಯರ ಪಟ್ಟಿ ಇಟ್ಟು ಚರ್ಚೆ

* ಪ್ರಲ್ಹಾದ ಜೋಶಿಗೆ ಹುಬ್ಬಳ್ಳಿ-ಧಾರವಾಡ ಫಿಕ್ಸ್

* ಚಿತ್ರದುರ್ಗ ಕ್ಷೇತ್ರಕ್ಕೂ ಅಂತಿಮವಾಗದ ಅಭ್ಯರ್ಥಿ

* ಶೋಭಾ ಕರಂದ್ಲಾಜೆಗೆ ಬೇರೆ ಕ್ಷೇತ್ರ ನೀಡುವ ಚರ್ಚೆ

* ಶೋಭಾ ವಿಚಾರದಲ್ಲಿ ವರಿಷ್ಠರದ್ದೇ ಫೈನಲ್ ಮಾತು

* ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಡೌಟು

* ಯದುವೀರ್ ಹೆಸರು ಮತ್ತೆ ಮತ್ತೆ ಮುನ್ನೆಲೆಗೆ

* ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿಗೆ ಬೆಂಬಲ

* ಅನಂತಕುಮಾರ್ ಹೆಗಡೆಗೆ ಟಿಕೆಟ್ ಅನುಮಾನ

* ಉತ್ತರ ಕನ್ನಡಕ್ಕೆ ಹೊಸ ಅಭ್ಯರ್ಥಿ ನಿಶ್ಚಿತ

* ಬಳ್ಳಾರಿಯಲ್ಲಿ ರಾಮುಲು ಪರ ಬ್ಯಾಟಿಂಗ್

* ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಪಕ್ಕಾ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಸೆಂಟ್ರಲ್​ನಲ್ಲಿ ಪಿಸಿ ಮೋಹನ್​ಗೆ ಬಹುತೇಕ ಖಚಿತ ಎಂದು ಗೊತ್ತಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್. ಮಂಜುನಾಥ್ ಕಣಕ್ಕಿಳಿಸಲು ವರಿಷ್ಠರೂ ಒಪ್ಪಿದ್ದಾರೆನ್ನಲಾಗಿದೆ. ಶೋಭಾ ಕರಂದ್ಲಾಜೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಬೇಡ ಎಂದು ತೀರ್ವನವಾದರೆ, ಬೆಂಗಳೂರು ಉತ್ತರ ಕ್ಷೇತ್ರ ಪರಿಗಣಿಸಬಹುದು ಎನ್ನಲಾಗಿದೆ. ವಿಜಯಪುರ ಕ್ಷೇತ್ರಕ್ಕೆ ಹಾಲಿ ಸಂಸದ ರಮೇಶ್ ಜಿಗಜಿಣಗಿ ಬದಲಿಗೆ ಮಾಜಿ ಸಚಿವ ಗೋವಿಂದ ಕಾರಜೋಳಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ.

ಚಿಕ್ಕೋಡಿ ಕ್ಷೇತ್ರಕ್ಕೆ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಬದಲಿಗೆ ಮಾಜಿ ಸಂಸದ ರಮೇಶ್ ಕತ್ತಿ ಹೆಸರೂ ಚರ್ಚೆಗೆ ಬಂದಿದೆ. ಬೆಳಗಾವಿಗೆ ಜಗದೀಶ್ ಶೆಟ್ಟರ್ ಹೆಸರನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ಟಿಕೆಟ್ ಹಂಚಿಕೆ ಸಂಬಂಧ ಇದು ಕೊನೇ ಸಭೆಯಾಗಿದೆ. ಹೀಗಾಗಿ ದಿಲ್ಲಿಯಲ್ಲಿ ರಾಜ್ಯ ನಾಯಕರ ಜತೆ ಬೇರೆ ಸಭೆ ಇರುವುದಿಲ್ಲ. ಇನ್ನೇನಿದ್ದರೂ ವೈಯಕ್ತಿಕವಾಗಿ ದೂರವಾಣಿ ಮೂಲಕ ಮಾಹಿತಿ ಪಡೆದುಕೊಳ್ಳುತ್ತಾರೆ ಎಂದು ರಾಜ್ಯ ನಾಯಕರೊಬ್ಬರು ಹೇಳಿದ್ದಾರೆ.

ಜೆಡಿಎಸ್ 2 ಸ್ಥಾನ

ಜೆಡಿಎಸ್​ಗೆ ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಮಾತ್ರ ನೀಡುವ ಬಗ್ಗೆ ಚರ್ಚೆಯಾಗಿದೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಮುನಿಸ್ವಾಮಿ ಇರುವುದರಿಂದ ಅವರನ್ನೇ ಮುಂದುವರಿಸಬೇಕು ಎನ್ನುವುದು ರಾಜ್ಯ ನಾಯಕರ ಅಭಿಪ್ರಾಯ. ಇದಕ್ಕೆ ಜೆಡಿಎಸ್ ನಾಯಕರನ್ನು ಒಪ್ಪಿಸಬೇಕು ಎಂದೂ ಚರ್ಚೆಯಾಗಿದೆ.

ಕಾಂಗ್ರೆಸ್​ನಲ್ಲಿ ಕೊನೇ ಕಸರತ್ತು

ಬೆಂಗಳೂರು: ರಾಜ್ಯದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆಸ್ ಉಳಿದ 21 ಕ್ಷೇತ್ರಗಳ ಆಯ್ಕೆ ಸಂಬಂಧ ಇಂದು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿತು. ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸ್ಕ್ರೀನಿಂಗ್ ಕಮಿಟಿ ಸದಸ್ಯ ಜಿಗ್ನೇಶ್ ಮೇವಾನಿ, ವಿಶ್ವಜಿತ್ ಕದಮ್ ಅಭಿಷೇಕ್ ದತ್, ಮಯೂರ್ ಜೈಕುಮಾರ್, ರೋಜಿ ಜಾನ್ ಭಾಗಿಯಾಗಿದ್ದರು. ಕಳೆದ ಬಾರಿಯ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಪುನಃ ಅಭಿಪ್ರಾಯ ಸಂಗ್ರಹ ನಡೆಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಪ್ರತ್ಯೇಕ ಪಟ್ಟಿಯೊಂದಿಗೆ ಸಭೆಗೆ ಆಗಮಿಸಿ ತಮ್ಮ ವಿಚಾರ ಮಂಡಿಸಿದರು. ಎಐಸಿಸಿ ಕಡೆಯಿಂದಲೂ ಅಭ್ಯರ್ಥಿಗಳ ಒಂದು ಪಟ್ಟಿ ಎದುರಿತ್ತು.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ, ಉಡುಪಿ ಚಿಕ್ಕಮಗಳೂರು, ಚಿಕ್ಕೋಡಿ, ಮೈಸೂರು, ಚಿತ್ರದುರ್ಗ, ರಾಯಚೂರು, ಬಳ್ಳಾರಿ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ. ಸಭೆ ಬಳಿಕ ಅಂತಿಮ ಪಟ್ಟಿಯನ್ನು ಸುರ್ಜೆವಾಲ ಎಐಸಿಸಿಗೆ ರವಾನಿಸಲಿದ್ದಾರೆ.

ಬದಲಾವಣೆ ಚರ್ಚೆ: ಮೈಸೂರು, ಉತ್ತರ ಕನ್ನಡ, ಬೆಂಗಳೂರು ಉತ್ತರ, ರಾಯಚೂರು, ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾರಾಗುತ್ತಾರೆ, ಬಿಜೆಪಿ ಅಭ್ಯರ್ಥಿ ಬದಲಿಸಿದರೆ ತಮ್ಮ ಕಡೆಯಿಂದ ಆಗಬೇಕಾದ ಬದಲಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.

ಬೆಳಗಾವಿ ಸಸ್ಪೆನ್ಸ್: ಬೆಳಗಾವಿ ಕ್ಷೇತ್ರದ ವಿಷಯದಲ್ಲಿ ಕೊನೆ ಕ್ಷಣದಲ್ಲಿ ಚಿತ್ರಣ ಬದಲಾಗಿದೆ. ಬೆಳಗಾವಿಯಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ, ಚಿಕ್ಕೋಡಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ಮುಖಂಡರು ಸಮಾಲೋಚನೆ ನಡೆಸಿದ್ದಾರೆ. ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಕ್ಷೇತ್ರದಿಂದ ಚುನಾವಣೆ ಕಣಕ್ಕಿಳಿಯಬೇಕೆಂಬ ಪಕ್ಷದ ಪ್ರಸ್ತಾಪವನ್ನು ತೀಕ್ಷ್ಣವಾಗಿಯೇ ತಿರಸ್ಕರಿಸಿದ್ದು, ಅವರ ಪುತ್ರನ ಸ್ಪರ್ಧೆಗೂ ಅಸಮ್ಮತಿ ಸೂಚಿಸಿದ್ದರಿಂದ ಲೆಕ್ಕಾಚಾರ ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್​ನಲ್ಲಿ ಚರ್ಚೆಯಲ್ಲಿರುವ ಹೆಸರು

* ಚಿಕ್ಕಬಳ್ಳಾಪುರ -ರಕ್ಷಾ ರಾಮಯ್ಯ

* ಹುಬ್ಬಳ್ಳಿ ಧಾರವಾಡ - ರಜತ ಉಳ್ಳಾಗಡ್ಡಿಮಠ

* ಚಾಮರಾಜನಗರ- ಸುನಿಲ್ ಬೋಸ್

* ಉಡುಪಿ-ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ

* ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್

* ದಕ್ಷಿಣ ಕನ್ನಡ- ವಿನಯ್ ಕುಮಾರ್ ಸೊರಕೆ

* ಬೆಳಗಾವಿ - ಪ್ರಿಯಾಂಕಾ ಜಾರಕಿಹೊಳಿ

* ಕೊಪ್ಪಳ - ರಾಜಶೇಖರ್ ಹಿಟ್ನಾಳ್

* ಬಳ್ಳಾರಿ- ನಾಗೇಂದ್ರ

* ಬಾಗಲಕೋಟೆ- ವೀಣಾ ಕಾಶಪ್ಪನವರ್

* ಬೆಂಗಳೂರು ಕೇಂದ್ರ- ಹ್ಯಾರಿಸ್

* ಕೋಲಾರ- ಕೆ.ಎಚ್.ಮುನಿಯಪ್ಪ

* ಚಿಕ್ಕೋಡಿ- ಲಕ್ಷ್ಮಣ ರಾವ್ ಚಿಂಗಳೆ

* ಚಿತ್ರದುರ್ಗ- ಚಂದ್ರಪ್ಪ

ಈ ಹೆಸರುಗಳ ಬಗ್ಗೆ ಸಭೆಯಲ್ಲಿ ಒಲವು ವ್ಯಕ್ತವಾಗಿದೆ. ಹಾಗೆಯೇ, ದಾವಣಗೆರೆ, ಕಲಬುರಗಿ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ವಿವೇಚನೆಗೆ ಬಿಡಲು ರಾಜ್ಯ ನಾಯಕರು ನಿರ್ಧರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net