

ಕೊಳ್ಳೇಗಾಲ; ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಲ್ಲಿ ಲೋಕ ಅದಾಲತ್ ಮಹತ್ವಪೂರ್ಣ ವೇದಿಕೆಯಾಗಿದೆ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್ ಹೇಳಿದರು.
ಪಟ್ಟಣದ ವಕೀಲರ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾದ ಎಲ್ಲ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳುವಂತೆ ಕಕ್ಷಿದಾರರ ಮನವೊಲಿಕೆ ಅತ್ಯಗತ್ಯವಾಗಿದೆ. ಲೋಕ ಅದಾಲತ್‌ನಲ್ಲಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಕಕ್ಷಿದಾರರ ಅಮೂಲ್ಯ ಸಮಯ ಉಳಿಯುತ್ತದೆ ಮತ್ತು ಉತ್ತಮ ಬಾಂಧವ್ಯ ನೆಲೆಗೊಳ್ಳಲಿದೆ. ನ್ಯಾಯಾಲಯ ಶುಲ್ಕವನ್ನು ಸಹ ಹಿಂಪಡೆಯುವ ಅವಕಾಶ ಇದೆ ಎಂದು ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಸುನಿತಾ ಮಾತನಾಡಿ, ವಕೀಲರು ಮತ್ತು ಕಕ್ಷಿದಾರರ ನಡುವೆ ಉತ್ತಮ ಸಂಬಂಧ ಇದೆ. ವಕೀಲರು ಕಕ್ಷಿದಾರರಿಗೆ ಸೂಕ್ತ ತಿಳಿವಳಿಕೆ ನೀಡುವ ಮೂಲಕ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವಂತೆ ಮನವೊಲಿಸಬೇಕು ಎಂದು ತಿಳಿಸಿದರು.
ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಈ ಅದಾಲತ್‌ನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳ್ಳುವಂತೆ ಮಾಡುವಲ್ಲಿ ವಕೀಲರ ಪಾತ್ರ ಮಹತ್ವವಾಗಿರುವುದರಿಂದ ವಕೀಲರು ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ರವಿ, ಉಪಾಧ್ಯಕ್ಷೆ ಸಿ.ಆರ್.ನಿರ್ಮಲಾ, ಕಾರ್ಯದರ್ಶಿ ಸಿ.ಬಿ.ಮಹೇಶ್ ಕುಮಾರ್ ಹಿರಿಯ ವಕೀಲ ಮಾದಪ್ಪ, ಬಸವರಾಜು, ಡಿ.ವೆಂಕಟಾಚಲ, ಪಟ್ಟಣ ಠಾಣೆ ಪಿಎಸ್‌ಐ ವರ್ಷ ಇದ್ದರು.