

* ವರ್ಷದಿಂದ ವರ್ಷಕ್ಕೆ ದಾಖಲಾತಿ ಕ್ಷೀಣ
* ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಕೊರತೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಸರ್ಕಾರಿ ಶಾಲೆಗಳು ಉಳಿಯಬೇಕು, ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಬೇಕು ಎನ್ನುವ ಮಾತುಗಳು ಭಾಷಣಕ್ಕಷ್ಟೇ ಸೀಮಿತವಾಗಿದೆ. ಈ ಪರಿಣಾಮ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ನಡುವೆಯೇ ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಈಗಾಗಲೇ 27 ಶಾಲೆಗಳು ಬಾಗಿಲು ಹಾಕಲಾಗಿದೆ.
ದಾಖಲಾತಿ ಕಡಿಮೆ:
ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಮತ್ತು ಅಗತ್ಯ ಮೂಲ ಸೌಕರ್ಯಗಳು ಇಲ್ಲ ಎನ್ನುವ ಕಾರಣಕ್ಕೆ ಪಾಲಕರು, ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಇದರ ಪರಿಣಾಮ ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ಬಲ ಕಳೆದುಕೊಂಡು ಬಾಗಿಲು ಹಾಕುತ್ತಿವೆ. ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಕಳೆದ ಮೂರ‌್ನಾಲ್ಕು ವರ್ಷಗಳ ದಾಖಲಾತಿ ಪ್ರಮಾಣವನ್ನು ಗಮನಿಸಿದಾಗ ಇದು ಸತ್ಯ ಕೂಡ ಎನಿಸುತ್ತಿದೆ.
2020-21ನೇ ಸಾಲಿನಲ್ಲಿ ಒಂದರಿಂದ 10ನೇ ತರಗತಿವರೆಗೂ ಜಿಲ್ಲೆಯಲ್ಲಿ 60,324 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರು. 2021-22ನೇ ಸಾಲಿಗೆ ಇದರ ಪ್ರಮಾಣ ಹೆಚ್ಚಿಗೆ ಆಯಿತು. ಕರೊನಾ ಕಾರಣದಿಂದಾಗಿ ನಗರ ಪ್ರದೇಶವನ್ನು ಬಿಟ್ಟು ತಮ್ಮೂರುಗಳಿಗೆ ಬಂದಿದ್ದ ಜನರು, ಮಕ್ಕಳಿಗೆ ಗ್ರಾಮೀಣ ಸರ್ಕಾರಿ ಶಾಲೆಗಳಿಗೆಯೇ ದಾಖಲು ಮಾಡಿದ್ದರು. ಆ ವರ್ಷ 63,763 ವಿದ್ಯಾರ್ಥಿಗಳು ದಾಖಲಾಗಿದ್ದು ಬಿಟ್ಟರೆ ನಂತರ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಲೇ ಇದೆ. 2023-24ರಲ್ಲಿ 56,467 ವಿದ್ಯಾರ್ಥಿಗಳು ದಾಖಲಾಗಿ ದಾಖಲಾತಿ ಪ್ರಮಾಣ 60 ಸಾವಿರದೊಳಗೆ ಕುಸಿಯಿತು. ಈ ಬಾರಿ ಜುಲೈ ಮಧ್ಯ ಭಾಗದಲ್ಲಿದ್ದರೂ ದಾಖಲಾತಿ ಪ್ರಮಾಣ 50 ಸಾವಿರಕ್ಕೆ ಕುಸಿತಕಂಡಿದೆ.
ಸರ್ಕಾರಿ ಶಾಲೆಗಳ ದಾಖಲಾತಿ ಮಟ್ಟ ಕುಸಿತಕ್ಕೆ ಪ್ರಮುಖ ಕಾರಣ ಮೂಲಸೌಕರ್ಯ ಕೊರತೆ. ಶಿಕ್ಷಕರೇ ಇಲ್ಲದ ಶಾಲೆಗಳನ್ನು ನಡೆಸುವುದು ಹೇಗೆ ಎನ್ನುವ ದುಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದ್ದು, ಇದನ್ನು ಸರಿದೂಗಿಸಲು ಸರ್ಕಾರ ಅತಿಥಿ ಶಿಕ್ಷಕರ ಮೊರೆ ಹೋಗಲಾಗಿದೆಯಾದರೂ ಸಮಸ್ಯೆಗೆ ಪರಿಹಾರ ಮಾತ್ರ ಕಾಣುತ್ತಿಲ್ಲ. ಇನ್ನು ಶಾಲಾ ಕಟ್ಟಡಗಳ ಕೊರತೆ ಮತ್ತು ಇರುವ ಕಟ್ಟಡಗಳೂ ಶಿಥಿಲಾವಸ್ಥೆಗೆ ತಲುಪಿರುವುದು ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ನಿರ್ಲಕ್ಷೃ ತೋರುತ್ತಿದೆ. ಜಿಲ್ಲೆಯಲ್ಲಿ ಈ ಬಾರಿಯೇ ಸುಮಾರು 125ಕ್ಕೂ ಹೆಚ್ಚು ಶಾಲೆಗಳನ್ನು ದುರಸ್ಥಿ ಮಾಡಲು ಕ್ರಿಯಾ ಯೋಜನೆ ರೂಪಿಸಿರುವುದು ಇದಕ್ಕೆ ಸಾಕ್ಷಿ.
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 27 ಸರ್ಕಾರಿ ಶಾಲೆಗಳು ದಾಖಲಾತಿ ಇಲ್ಲದ ಕಾರಣ ಬಂದ್ ಆಗಿವೆ. ಇದರಲ್ಲಿ ಅವಿಭಜಿತ ಕನಕಪುರ ತಾಲೂಕಿನ ಶಾಲೆಗಳೇ ಹೆಚ್ಚು ಎನ್ನುವುದು ಆತಂಕಕಾರಿ ಬೆಳವಣಿಗೆ. ಕನಕಪುರ ಮತ್ತು ಹಾರೋಹಳ್ಳಿ ತಾಲೂಕಿನ 15, ಮಾಗಡಿ ಮತ್ತು ಚನ್ನಪಟ್ಟಣದ ತಲಾ 5 ಹಾಗೂ ರಾಮನಗರ ಎರಡು ಶಾಲೆಗಳು ಬಾಗಿಲು ಹಾಕಿವೆ. ಇದರ ಹೊರತಾಗಿಯೂ ಸಾಹಸ ಮರೆಯುತ್ತಿರುವ ಶಾಲಾ ಶಿಕ್ಷಣ ಇಲಾಖೆ ಕೇವಲ ಒಂದು ವಿದ್ಯಾರ್ಥಿ ಇರುವ ಕಡೆಗಳಲ್ಲಿಯೂ ಶಾಲೆಯನ್ನು ನಡೆಸುತ್ತಿದೆ. ಇಂತಹ ಶಾಲೆಗಳಿಗೂ ಶೀಘ್ರವೇ ಬೀಗ ಬೀಳುವುದು ಗ್ಯಾರಂಟಿ ಎನ್ನುವುದು ಸೂಚಿಸುತ್ತಿವೆ.