ಜೂನ್ 7ರವರೆಗೆ ಲಾಕ್​ಡೌನ್ ವಿಸ್ತರಣೆ

carona logo (2)
Published on

ಹಾವೇರಿ: ಜಿಲ್ಲಾದ್ಯಂತ ಕೋವಿಡ್ ಪ್ರಕರಣ ನಿಯಂತ್ರಣದ ನಿಟ್ಟಿನಲ್ಲಿ ಮೇ 25ರ ಬೆಳಗ್ಗೆ 6 ಗಂಟೆಯಿಂದ ಜೂನ್ 7ರ ಬೆಳಗ್ಗೆ 6ಗಂಟೆವರೆಗೆ ಲಾಕ್​ಡೌನ್ ಮುಂದುವರಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ವಾರದಲ್ಲಿ 3 ದಿನ ಮಂಗಳವಾರ, ಗುರುವಾರ, ಶನಿವಾರ ಬೆಳಗ್ಗೆ 6ರಿಂದ 10ರವರೆಗೆ ಕೋವಿಡ್ ಮಾರ್ಗಸೂಚಿಯನ್ವಯ ಸಾರ್ವಜನಿಕರು ತಾವು ವಾಸಿಸುವ ಸ್ಥಳದಲ್ಲಿ ಹತ್ತಿರದ ಅಂಗಡಿಗಳಿಂದ ಅಗತ್ಯ ವಸ್ತು ಖರೀದಿಸಲು ವಿನಾಯಿತಿ ನೀಡಲಾಗಿದೆ. ಹಾಲು, ಆಸ್ಪತ್ರೆಗಳು, ಔಷಧ ಅಂಗಡಿಗಳು, ಪಡಿತರ ಆಹಾರ ಧಾನ್ಯಗಳು, ಗೃಹ ಬಳಕೆ ಎಲ್​ಪಿಜಿ ಸಿಲಿಂಡರ್ ಸಾಗಣೆ, ವಿತರಣೆ, ಆಂಬುಲೆನ್ಸ್, ಅಗ್ನಿಶಾಮಕ, ಪೆಟ್ರೋಲ್ ಪಂಪ್, ಆಮ್ಲಜನಕ ಉತ್ಪಾದನೆ ಘಟಕ, ಎಟಿಎಂ, ಬ್ಯಾಂಕ್, ಅಂಚೆ ಕಚೇರಿ, ವಿಮಾ, ಟೆಲಿಕಾಂ, ಇಂಟರ್​ನೆಟ್ ಹಾಗೂ ಖಾಸಗಿ ಭದ್ರತಾ ಸೇವೆಗಳಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿಗೆ ಲಾಕ್​ಡೌನ್​ನಿಂದ ವಿನಾಯಿತಿ ನೀಡಿ ಅನುಮತಿ ನೀಡಲಾಗಿದೆ. ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪರಿಕರ, ಯಂತ್ರೋಪಕರಣಗಳು, ಬೀಜ, ರಸಗೊಬ್ಬರ ಮಾರಾಟಕ್ಕೆ ಬೆಳಗ್ಗೆ 6ರಿಂದ 10ರವರೆಗೆ ವಿನಾಯಿತಿ ನೀಡಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳ ಸ್ಥಳದಲ್ಲಿಯೇ ವಾಸವಿದ್ದ ಕಟ್ಟಡ ಕೆಲಸಗಾರರಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಮತಿಯಿದೆ. ಸ್ಥಳದಲ್ಲೇ ವಾಸಿಸುವ (with in-situ) ಸಿಬ್ಬಂದಿ ಕಾರ್ವಿುಕರು, ಕೆಲಸಗಾರರನ್ನು ಉಪಯೋಗಿಸಿಕೊಂಡು ಜೀವನಾವಶ್ಯಕ ವಸ್ತುಗಳನ್ನು ತಯಾರಿಸುವ, ನಿರಂತರ ಕಾರ್ಯಾಚರಣೆ ನಡೆಸುವ ಉತ್ಪಾದನೆ ಘಟಕಗಳು, ಕಾರ್ಖಾನೆಗಳಿಗೆ ಅನುಮತಿ ನೀಡಲಾಗಿದೆ. ಈ ಅವಧಿಯಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರಕ್ಕೆ 5 ಜನಕ್ಕೆ ಮೀರದಂತೆ ಅನುಮತಿ ನೀಡಲಾಗಿದೆ. ಈ ಆದೇಶ ಕೋವಿಡ್ ಕಾರ್ಯನಿರತ ಅಧಿಕಾರಿಗಳು, ಸಿಬ್ಬಂದಿ, ಸರ್ಕಾರಿ ವಾಹನಗಳ ಓಡಾಟಕ್ಕೆ ಅನ್ವಯಿಸುವುದಿಲ್ಲ. ಜಿಲ್ಲಾದ್ಯಂತ ವಿನಾಯಿತಿ ಪಡೆದ ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ 4 ಜನರಿಗೂ ಅಧಿಕ ವ್ಯಕ್ತಿಗಳು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net