

ಬೆಂಗಳೂರು: ಕರೊನಾ COVID19 ವೈರಸ್ ಸೋಂಕು ತಡೆಗೆ ಸಂಬಂಧಿಸಿ ರಾಜ್ಯದಲ್ಲಿ ಲಾಕ್ಡೌನ್ ಕ್ರಮ ಮತ್ತು ಸೋಂಕು ನಿಯಂತ್ರಣ ಕಾರ್ಯತಂತ್ರಗಳ ಸುಲಭ ಅನುಷ್ಠಾನಕ್ಕೆ ಬೇಕಾದಂತೆ ಅದರ ವಿವರಣೆಯನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಸುತ್ತೋಲೆಯನ್ನು ಪ್ರಕಟಿಸಿದೆ.
ಇದರ ಪ್ರಕಾರ, ನಿಯಂತ್ರಿತ ವಲಯ (ಕಂಟೇನ್ಮೆಂಟ್ ಝೋನ್) ಎಂದರೆ ನೋವೆಲ್ ಕರೊನಾ ವೈರಸ್ ಪಾಸಿಟಿವ್ ವ್ಯಕ್ತಿಯ ನಿವಾಸ ಇರುವ ಸುತ್ತಲಿನ 'ಪ್ರದೇಶ' ವಾಗಿರುತ್ತದೆ. ಇಲ್ಲಿ ವೈರಾಣು ಸೋಂಕು ಹರಡದಂತೆ ಅತ್ಯಂತ ತೀವ್ರತರದ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ. ಈ 'ಪ್ರದೇಶ'ವು ಎಲ್ಲಿಯ ತನಕ ನಿಯಂತ್ರಿತ ವಲಯವಾಗಿ ಇರುತ್ತದೆ ಎಂದರೆ
1) ಹಿಂದಿನ ಬಾರಿ ಪಾಸಿಟಿವ್ ಪ್ರಕರಣ ವರದಿಯಾದ 28 ದಿನಗಳ ಅವಧಿಯಲ್ಲಿ ಯಾವುದೇ ಹೊಸ ಕೋವಿಡ್ 19 ಪ್ರಕರಣ ಅಲ್ಲಿ ವರದಿಯಾಗಿರಬಾರದು.
ಅಥವಾ
2) ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸಕ್ರಿಯ ಗೃಹ ದಿಗ್ಬಂಧನ(ಹೋಮ್ ಕ್ವಾರಂಟೈನ್)ದಲ್ಲಿ ಇರಬೇಕು.
ಇಲ್ಲಿ ಪ್ರದೇಶ ಎಂಬ ಪದಕ್ಕೆ ಈ ರೀತಿಯ ವ್ಯಾಖ್ಯಾನವಿದೆ-
1) ಅಪಾರ್ಟ್ಮೆಂಟ್ ಸಂಕೀರ್ಣಕ್ಕೆ - ಕೋವಿಡ್ ಪಾಸಿಟಿವ್ ವ್ಯಕ್ತಿಯ ನಿವಾಸ ಇರುವ ನಿರ್ದಿಷ್ಟ ಟವರ್/ಬ್ಲಾಕ್. ಒಂದು ವೇಳೆ ಒಂದೇ ಬ್ಲಾಕ್ ಅಪಾರ್ಟ್ಮೆಂಟ್ ಆಗಿದ್ದರೆ ಆಗ ಇಡೀ ಅಪಾರ್ಟ್ಮೆಂಟ್.
2) ಪ್ರತ್ಯೇಕ ಮನೆ/ವಿಲ್ಲಾ: ಕೋವಿಡ್ ಪಾಸಿಟಿವ್ ವ್ಯಕ್ತಿಯ ಮನೆ ಇರುವ ರಸ್ತೆಯನ್ನು ಒಳಗೊಂಡ/ ಭೌತಿಕ ಪರಿಧಿಯ 100 ಮೀಟರ್ ಸುತ್ತಮುತ್ತಲಿನ ಪ್ರದೇಶ
3) ಕೊಳಚೆ ಪ್ರದೇಶಕ್ಕೆ: ಇದು ಅಧಿಸೂಚಿತವೂ ಆಗಿರಬಹುದು ಅಥವಾ ಅಲ್ಲದೇ ಇರಬಹುದು. ಕೋವಿಡ್ ಪಾಸಿಟಿವ್ ವ್ಯಕ್ತಿಯ ಮನೆ ಇರುವ ರಸ್ತೆಯನ್ನೂ ಒಳಗೊಂಡ/ಭೌತಿಕ 100 ಮೀಟರ್ ಪರಿಧಿಯ ಇಡೀ ಕೊಳೆಗೇರಿ.
4) ಗ್ರಾಮೀಣ ಪ್ರದೇಶಕ್ಕೆ: ಕೋವಿಡ್ ಪಾಸಿಟಿವ್ ವ್ಯಕ್ತಿ ವಾಸವಾಗಿರುವ ಅಥವಾ ಹರಡಿರುವ ಸಣ್ಣ ಪ್ರದೇಶ- ಅಗತ್ಯಕ್ಕೆ ತಕ್ಕಂತೆ ಇಡೀ ವಾಸದ ಪ್ರದೇಶವನ್ನು ಈ ವ್ಯಾಪ್ತಿಗೆ ತರಬಹುದು.
ಈ ಪ್ರದೇಶಗಳ ರಸ್ತೆ ಅಥವಾ ಇತರೆ ಸ್ವರೂಪಗಳನ್ನು ಗುರುತಿಸಿ 'ಪ್ರದೇಶ ಎಂದು ಗಡಿರೇಖೆಯನ್ನು ಬಿಬಿಎಂಪಿಯ ಆಯುಕ್ತರು/ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ನಿರ್ದಿಷ್ಟ ಪಡಿಸಿದ್ದಾರೆ.
ಬಫರ್ ಝೋನ್: ಇದು ನಿಯಂತ್ರಿತ ವಲಯದ ಸುತ್ತ ಇರುವ ನಗರ ಪ್ರದೇಶದ 5 ಕಿ.ಮೀ. ವ್ಯಾಪ್ತಿ ಮತ್ತು ಗ್ರಾಮೀಣ ಪ್ರದೇಶದಲ್ಲಾದರೆ 7 ಕಿ.ಮೀ. ವ್ಯಾಪ್ತಿ. ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಬಫರ್ ಝೋನ್ನಲ್ಲಿ ಸದಾ ಕಣ್ಗಾವಲು ಮತ್ತು ಸಾಮಾಜಿಕ ಅಂತರದ ಕ್ರಮಗಳು ಜಾರಿಯಲ್ಲಿ ಇರಬೇಕು. ಇದರ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರ ಬಫರ್ ಝೋನ್ ಆಗಿದ್ದು, ಅಲ್ಲಿ ಪ್ರತಿ ಮನೆಗಳ ತಪಾಸಣೆ ನಡೆಯಬೇಕು.
ಒಂದು ಪ್ರದೇಶವನ್ನು ನಿಯಂತ್ರಿತ ವಲು ಎಂದು ಘೋಷಣೆ ಮಾಡಿದ 28 ದಿನಗಳ ಒಳಗೆ ಅಲ್ಲಿ ಯಾವುದೇ ಹೊಸ ಕೋವಿಡ್ 19 ಪ್ರಕರಣ ವರದಿಯಾಗದೇ ಇದ್ದರೆ ಅಥವಾ ಆ ನಿಯಂತ್ರಿತ ವಲಯದಲ್ಲಿ ಹತ್ತಕ್ಕಿಂತ ಕಡಿಮೆ ಸಂಪರ್ಕ/ ಗೃಹ ದಿಗ್ಬಂಧನ ಸಕ್ರಿಯವಾಗಿದ್ದರೆ ಆಗ ಆ ನಿಯಂತ್ರಿತ ವಲಯವನ್ನು ಸಾಮಾನ್ಯ ವಲಯ ಎಂದು ಬಫರ್ ಝೋನ್ ಸಾಮಾನ್ಯ ವಲಯ ಎಂದು ಪರಿಗಣಿಸಲಾಗುತ್ತದೆ.
ವಲಯ: ಸಾಂಕ್ರಾಮಿಕ ಶಾಸ್ತ್ರದ ಪ್ರಕಾರ ಸಂಪರ್ಕವನ್ನು ಹೊಂದಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಒಟ್ಟು ಗುಂಪು ಅಥವಾ ಸಮುದಾಯವನ್ನು ವಲಯ ಎನ್ನಲಾಗುತ್ತದೆ. ಇಲ್ಲಿನ ಪ್ರಕರಣಗಳು ಒಬ್ಬ ನಿರ್ದಿಷ್ಟ ಕೋವಿಡ್ -ಪಾಸಿಟಿವ್ ವ್ಯಕ್ತಿಗೆ ಸಂಬಂಧಿಸಿದ್ದಾಗಿದ್ದು, ಆ ಚಿಕ್ಕ ಪ್ರದೇಶದಲ್ಲಿ ಅಂತಹ ಅನೇಕ ಪ್ರಕರಣಗಳು ಇರುತ್ತವೆ.