ಲಾಕ್​ಡೌನ್​ ನಿಯಮ ಈ ರಿಕ್ರಿಯೇಷನ್ ಕ್ಲಬ್​ಗೆ ಅನ್ವಯವಾಗಿರಲಿಲ್ಲ- ಇಸ್ಪೀಟ್​ ಆಡ್ತಾ ಇದ್ದವರೀಗ ಅಂದರ್​!

Ispit game arrested 23 APR 20
Published on

ಬೆಂಗಳೂರು: ಕರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್​ಡೌನ್ ಚಾಲ್ತಿಯಲ್ಲಿದೆ. ಆದಾಗ್ಯೂ ಲಾಕ್​ಡೌನ್ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿತ್ತು ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಮ್ಮಸಂದ್ರ ಮುತ್ತನಲ್ಲೂರು ಕ್ರಾಸ್​ ಸೂಲಕುಂಟೆ ಗ್ರಾಮದ ಶ್ರೀ ಆರ್​ಎಸ್​ವಿ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್​. ಇಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಲೇ ಇತ್ತು. ಈ ಕುರಿತ ಖಚಿತ ಮಾಹಿತಿ ಪಡೆದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬುಧವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿಯೇ ಬಿಟ್ಟರು.

ಕ್ಲಬ್​ನಲ್ಲಿದ್ದರು ಎಂಟು ಮಂದಿ. ದುಡ್ಡು ಕಟ್ಟಿ ಇಸ್ಪೀಟ್ ಆಡುತ್ತಾ ಇದ್ದರು. ಪೊಲೀಸರ ಆಗಮನದಿಂದ ಬೆಚ್ಚಿಬಿದ್ದ ಅವರು ಅಲ್ಲಿಂದ ತಪ್ಪಿಸಲು ಪ್ರಯತ್ನಿಸಿದರಾದರೂ ಫಲ ಕೊಡಲಿಲ್ಲ. ಈಗ ಇವೆಲ್ಲರೂ ಪೊಲೀಸರ ಅತಿಥಿಗಳು. ಬಂಧಿತರನ್ನು ರಾಜು ಬಿನ್ ಕೃಷ್ಣಪ್ಪ (40)- ಕ್ಲಬ್​ನ ಕ್ಯಾಷಿಯರ್​, ಚಂದ್ರಪ್ಪ ಬಿನ್​ ಮದನಗಿರಿಯಪ್ಪ (52), ಚಲುವಯ್ಯ ಬಿನ್ ಮುನಿನಾಗಪ್ಪ (49), ಕಾರ್ತಿಕ್ ಬಿನ್ ವೆಂಕಟಸ್ವಾಮಿ(30), ಪ್ರವೀಣ ಬಿನ್ ಲೇಟ್ ಅಶೋಕ(32), ವಿಜಯ ಬಿನ್ ಲಕ್ಷ್ಮಣ ಪ್ರಸಾದ್​(36), ಲೋಕೇಶ್ ಬಿನ್ ಕೃಷ್ಣಪ್ಪ (40), ಮಂಜುನಾಥ ಬಿನ್ ಚಿನ್ನದೊರೈ(37) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಆಟಕ್ಕೆ ಬಳಸಿದ ಇಸ್ಪೀಟ್ ಕಾರ್ಡ್ಸ್​ ಮತ್ತು 60,000 ರೂಪಾಯಿ ನಗದನ್ನು ವಶಪಡಿಸಲಾಗಿದೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾರ್ಗದರ್ಶನದಲ್ಲಿ, ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ವಿರೂಪಾಕ್ಷಪ್ಪ ಡಿ.ಟಿ ನೇತೃತ್ವದಲ್ಲಿ ಎಸ್​ಐ ಎಪಿ ಕುಮಾರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net