

ಶ್ರೀರಂಗಪಟ್ಟಣ: ಕ್ಷೇತ್ರದ ಗಂಗಾಮತಸ್ಥರ ಒಕ್ಕೊರಲ ಕೋರಿಕೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸ್ಥಳ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಬುಧವಾರ ಗಂಗಾಮತಸ್ಥ (ಬೆಸ್ತ) ಸಮುದಾಯದಿಂದ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ 904ನೇ ಜನ್ಮ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸಂಸತ್ತು ಪರಿಕಲ್ಪನೆಗೂ ಶತಮಾನಗಳ ಹಿಂದೆಯೇ ಬಸವಣ್ಣನವರ ಅನುಭವ ಮಂಟಪದಲ್ಲಿ ಸ್ಥಾನ ಪಡೆದಿದ್ದ ಶರಣ ಶ್ರೇಷ್ಠ ಅಂಬಿಗರ ಚೌಡಯ್ಯ, ಸಮಾಜದ ನ್ಯೂನ್ಯತೆಗಳನ್ನು ತಿದ್ದುವಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಕ್ಷೇತ್ರದಲ್ಲಿರುವ ಬೆಸ್ತ ಸಮುದಾಯದ ಜನರು ನನಗೆ ಅತ್ಯಂತ ಪ್ರೀತಿ ನೀಡಿದ್ದು, ನನಗೂ ಅವರ ಮನೆಯ ಸದಸ್ಯರಲ್ಲಿ ಒಬ್ಬನಂತೆ ಸ್ಥಾನ ನೀಡಿದ್ದಾರೆ. ನಾನು ಮತ್ತು ನನ್ನ ಕುಟುಂಬ ಅವರೊಂದಿಗೆ ಸದಾ ಜತೆಗಿದ್ದು, ಅವರ ಮನೆಯ ಮಗನಂತೆ ಅವರ ಕುಂದು-ಕೊರತೆಗಳ ನಿವಾರಣೆಗೆ ಮುಂದಾಗುವ ಜತೆಗೆ ಸಮುದಾಯ ಜನರ ಕೋರಿಕೆಯಂತೆ ಭವನ ನಿರ್ಮಾಣಕ್ಕೆ ಪುರಾತತ್ವ ಇಲಾಖೆಯ ಕೆಲವೊಂದು ಸಮಸ್ಯೆಗಳ ನಡುವೆಯೂ ಸಣ್ಣದಾದರೂ ಒಂದು ಸ್ಥಳ ಕೊಡಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಹಾವೇರಿ ಜಿಲ್ಲೆ ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದ ಸಮುದಾಯದ ಶ್ರೀಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಕುಲದೇವತೆ ಗಂಗೆಯ ಮಕ್ಕಳಾಗಿ ರಾಜ್ಯದ್ಯಂತ ವಿವಿಧ ಹೆಸರುಗಳಲ್ಲಿ ನೆಲೆ ಕಂಡಿರುವ ಬೆಸ್ತ, ಕೋಲಿ, ಗಂಗಾಮತಸ್ಥ ಜನರಲ್ಲಿ ಸಂಘಟನೆಯ ಕೊರತೆ ಹೆಚ್ಚಿದೆ. ನಮ್ಮ ಜನರು ನಮ್ಮ ಸಮುದಾಯದ ಮಹಾಪುರುಷರು ಹಾಗೂ ನಮ್ಮ ಸಮುದಾಯದ ಹಿನ್ನೆಲೆ ಅರಿತು ಜಾಗೃತಿಗೊಳ್ಳುವ ಅವಶ್ಯಕತೆ ಇದೆ. ಹೀಗಾಗಿಯೇ ಸರ್ಕಾರದ ಹಲವು ಸೌಲಭ್ಯ, ಯೋಜನೆ, ಅಭಿವೃದ್ಧಿ ಮತ್ತು ಮೀಸಲಾತಿ ಪಡೆಯುವಲ್ಲಿ ರಾಜ್ಯದಲ್ಲಿ ನಾವಿನ್ನೂ ಹಿಂದುಳಿದಿದ್ದೇವೆ. ಸಮುದಾಯದ ಜನರು ಸಂಘಟನೆಯಿಂದ ಜಾಗೃತಗೊಂಡು ಅವಕಾಶಗಳನ್ನು ಪಡೆದು ಮೇಲೇರುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಕ್ಷೇತ್ರಪಾಲಕ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗ ಬೆಳ್ಳಿ ಸಾರೋಟಿನಲ್ಲಿ ನಿಜಶರಣ ಅಂಬಿಗರ ಚೌಡಯ್ಯರನ್ನು ಪ್ರತಿಷ್ಠಾಪಿಸಿ, ಶ್ರೀಶಾಂತಭೀಷ್ಮ ಸ್ವಾಮೀಜಿ ಅವರನ್ನು ಕಲ್ಯಾಣ ಮಂಟಪದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ಈ ವೇಳೆ ಪೂರ್ಣ ಕುಂಭ ಕಳಸಗಳನ್ನು ಹೊತ್ತು ಮಹಿಳೆಯರು ಜಾನಪದ ಕಲಾತಂಡಗಳು, ಗಾರುಡಿ ಗೊಂಬೆ, ಡೊಳ್ಳು ಕುಣಿತ, ಕೋಲಾಟ, ತಮಟೆ-ನಗಾರಿಗಳ ಸದ್ದಿನೊಂದಿಗೆ ರಾಸುಗಳ ಸಹಿತ ಪಟ್ಟಣದ ಮುಖ್ಯರಸ್ತೆಯಲ್ಲಿ ಸಮುದಾಯದ ಜನರು ಮೆರವಣಿಗೆ ನಡೆಸಿದ್ದು, ಪುರಜನರ ಗಮನ ಸೆಳೆಯಿತು.
ಗಂಗಾಮತಸ್ಥ ಸಮುದಾಯದ ತಾಲೂಕು ಅಧ್ಯಕ್ಷ ಎಂ.ಚಂದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮುದಾಯದ ಅಧ್ಯಕ್ಷ ಮೌಲಾಲಿ, ಉಪಾಧ್ಯಕ್ಷ ನಾಗರಾಜು ಮಣ್ಣೂರು, ಜಿಲ್ಲಾಧ್ಯಕ್ಷ ರಮೇಶ್, ಶ್ರೀರಂಗಪಟ್ಟಣ ತಾಲೂಕು ಉಪಾಧ್ಯಕ್ಷರಾದ ತಮ್ಮಣ್ಣ, ದೇವರಾಜು, ಪ್ರಧಾನ ಕಾರ್ಯದರ್ಶಿ ಬಾಲರಾಜು, ಜಿಪಂ ಮಾಜಿ ಸದಸ್ಯೆ ಪ್ರಭಾವತಿ ಪ್ರಕಾಶ್, ಪುರಸಭಾ ಸದಸ್ಯರಾದ ಗಂಜಾಂ ಶಿವು, ಎಸ್.ಟಿ.ರಾಜು, ಮಂಗಳಮ್ಮ, ಮಾಜಿ ಸದಸ್ಯ ಕೃಷ್ಣ ಮತ್ತಿತರರು ಹಾಜರಿದ್ದರು.