ಸೀಬರ್ಡ್ ಸಮೀಪ ಜೀವಂತ ನಾಡ ಬಾಂಬ್ ಪತ್ತೆ

Bomb at Chendiya
Published on

ಕಾರವಾರ: ಸೀಬರ್ಡ್ ನೌಕಾನೆಲೆಯ ಕಂಪೌಂಡ್‌ನ ಸಮೀಪ ನಾಡ ಬಾಂಬ್ ಒಂದು ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಅದನ್ನು ಶನಿವಾರ ನಿಷ್ಕ್ರಿಯಗೊಳಿಸಿರುವುದು, ತಡವಾಗಿ ಬಹಿರಂಗವಾಗಿದೆ.
ಚೆಂಡಿಯಾ ಜನತಾ ಕಾಲನಿ ಸಮೀಪ ಶುಕ್ರವಾರ ರಾತ್ರಿ 10 ಗಂಟೆಯ ಹೊತ್ತಿಗೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿತ್ತು. ಸ್ಥಳೀಯರು ಹೋಗಿ ಪರಿಶೀಲಿಸಿದಾಗ ಕಾಡು ಹಂದಿಯೊಂದು ಮೃತಪಟ್ಟಿದ್ದು, ಕಂಡಿತು.

ಅರಣ್ಯ ಅಧಿಕಾರಿಗಳು ಈ ಸಂಬಂಧ ತನಿಖೆ ನಡೆಸಿ ಅಮದಳ್ಳಿ ಕಂತ್ರಿವಾಡದ ಸಿಪ್ರೇನ್ ಥಾಮತ್ ಫರ್ನಾಂಡಿಸ್ ಎಂಬುವವನನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ. ಆಗ ಆತ ಎರಡು ಬಾಂಬ್ ಇಟ್ಟಿದ್ದಾಗಿ ತಿಳಿಸಿದ್ದ.

ಇದನ್ನೂ ಓದಿ:ಹೈನುಗಾರರಿಗೆ ಹಾಲು ಖರೀದಿ ದರ ಹೆಚ್ಚಳ: 3 ರೂ. ಪರಿಷ್ಕೃತ ದರ ನೀಡಲು ಬಮೂಲ್ ನಿರ್ಧಾರ
ನಂತರ ಪರಿಶೀಲನೆ ನಡೆಸಲಾಗಿ ಶನಿವಾರ ಇನ್ನೊಂದು ಜೀವಂತ ಬಾಂಬ್ ಪತ್ತೆಯಾಗಿದ್ದು, ಜಿಲ್ಲಾ ಪೊಲೀಸ್ ಬಾಂಬ್ ನಿಷ್ಕ್ರಿಯ ದಳದ ತಂಡ ಸ್ಥಳವನ್ನು ವಶಕ್ಕೆ ಪಡೆದು, ಬಂಬ್‌ನ್ನು  ನಿಷ್ಕ್ರಿಯಗೊಳಿಸಿದೆ.

ಈ ಬಾಂಬ್ ಇರುವ ಸ್ಥಳ ನೌಕಾನೆಲೆಯ ಕಂಪೌಂಡ್ ಸಮೀಪವೇ ಇರುವುದರಿಂದ ನೌಕಾನೆಲೆಯಲ್ಲೂ ಭದ್ರತೆ ಹೆಚ್ಚಿಸಲಾಗಿದೆ.
ಅರಣ್ಯ ಇಲಾಖೆಯಲ್ಲಿ ಸಿಪ್ರೇನ್ ಫರ್ನಾಂಡಿಸ್ ವಿರುದ್ಧ  ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೆ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ ಹಂದಿಯನ್ನು ಕೊಲ್ಲುವ ಸಲುವಾಗಿ ನಾಡ ಬಾಂಬ್ ಇಟ್ಟಿರುವುದನ್ನು ಆತ ಬಾಯಿಬಿಟ್ಟಿದ್ದಾನೆ.
ಜನಸ್ಹೇಹಿ ಹಂದಿ:
ಚೆಂಡಿಯಾದಲ್ಲಿ ಕಾಡು ಹಂದಿಯೊಂದು ಜನಸ್ನೇಹ ಬೆಳೆಸಿತ್ತು. ಅದು, ದನಗಳ ಜತೆ ಊರಿಗೆ ಬಂದು ಜನ ಕೊಟ್ಟ ತಿಂಡಿ ತಿನ್ನುತ್ತಿತ್ತು. `ಕಾಂತಾರ' ಚಲನಚಿತ್ರ ಪ್ರಸಿದ್ಧವಾದ ಬಳಿಕ ಜನ ಅದನ್ನು ಹೆಚ್ಚು ಗೌರವಿಸಲು ಪ್ರಾರಂಭಿಸಿದ್ದರು. ಆದರೆ, ಶುಕ್ರವಾರ ಸಿಪ್ರೇನ್ ಆ ಕಾಡು ಹಂದಿಯನ್ನು ಬಾಂಬ್ ಇಟ್ಟು ಕೊಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ನೌಕಾನೆಲೆಯ ಸಮೀಪ ಇಂಥ ಘಟನೆ ನಡೆದಿರುವುದು ಪ್ರಕರಣ ಗಂಭೀರ ಸ್ವರೂಪ ಪಡೆಯಲು ಕಾರಣವಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net