ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಲಾಬಿ

congrees
Published on

ಬೆಂಬಲಿಗರಿಗೆ ಸ್ಥಾನ ಕೊಡಿಸಲು ಮಾಜಿ, ಹಾಲಿ ಶಾಸಕರ ಕಸರತ್ತು- ಎನ್‌ಎಚ್‌ಎಸ್ ಮತ್ತು ಕೆಎಚ್‌ಪಿ ಇಬ್ಬರಿಗೂ ಪ್ರತಿಷ್ಠೆ


ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಬೆಂಬಲಿಗರಿಗೆ ಕೊಡಿಸಲು ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ಸರ್ಕಾರದ ಮಟ್ಟದಲ್ಲಿ ಲಾಬಿ ಶುರುವಿಟ್ಟುಕೊಂಡಿದ್ದಾರೆ.
ಯಾವುದೇ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನದ ಸ್ಥಾನಗಳನ್ನು ಪಕ್ಷಕ್ಕಾಗಿ ದುಡಿದವರಿಗೆ ನೀಡುವುದು ವಾಡಿಕೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆಯುತ್ತಿದ್ದು, ಈಗ ನಿಗಮ ಮಂಡಳಿಗಳ ಹಂಚಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶನ ಹಂತ ಹಂತವಾಗಿ ನಡೆಯುತ್ತಿದೆ. ಆದ್ದರಿಂದ ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ನಾಯಕರ ಬೆನ್ನು ಹತ್ತಿದ್ದಾರೆ.
ಯಾರ ಶಿಫಾರಸಿಗೆ ಮನ್ನಣೆ?
ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಗರಾದ ಪುರಸಭೆ ಮಾಜಿ ಸದಸ್ಯ ಹಾಗೂ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎಸ್.ಸೋಮೇಶ್ ಅವರ ಹೆಸರನ್ನು ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಶಿಫಾರಸು ಮಾಡಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಬಳಿ ಬೆಂಬಲಿಗರನ್ನು ಆಯ್ಕೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಸರ್ಕಾರಕ್ಕೆ ಬೆಂಬಲ ಘೋಷಿಸಿರುವ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು, ಚುನಾವಣೆ ಸಮಯದಲ್ಲಿ ಬೆಂಬಲಕ್ಕೆ ನಿಂತಿದ್ದ ಹಿಂದುಳಿದ ವರ್ಗದ ನಗರಸಭೆ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ನರಸಿಂಹಮೂರ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಲೇ ಸ್ಥಾನಕ್ಕೆ ರಾಜೀನಾಮೆ ನೀಡಿ ಪುಟ್ಟಸ್ವಾಮಿಗೌಡರ ಬಣಕ್ಕೆ ಸೇರಿ ರಾಜಕೀಯ ಶಕ್ತಿ ತುಂಬಿದ್ದರು. ಬಳಿಕ ಲೋಕಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಬೆನ್ನೆಲುಬಾಗಿ ನಿಂತರಲ್ಲದೆ, ಮತ್ತೊಮ್ಮೆ ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿದ್ದರೂ ಬೆಂಬಲಿಗರಿಗೆ ಅವಕಾಶ ಮಾಡಿಕೊಟ್ಟ ಕಾರಣ ನರಸಿಂಹಮೂರ್ತಿ ಅವರಿಗೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕೊಡಿಸಲೇಬೇಕು ಎಂಬುದು ಪುಟ್ಟಸ್ವಾಮಿ ಗೌಡರ ಆಶಯವಾಗಿದೆ. ಜತೆಗೆ ಹಿಂದುಳಿದ ವರ್ಗವರಿಗೆ ಸ್ಥಾನ ಒದಗಿಸಿಕೊಟ್ಟ ಶ್ರೇಯಸ್ಸು ಕೂಡ ಸಿಗಲಿದೆ. ಅಂತಿಮವಾಗಿ ಯಾರ ಶಿಫಾರಸಿಗೆ ಮನ್ನಣೆ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಇಬ್ಬರಿಗೂ ಪ್ರತಿಷ್ಠೆ
ಕ್ಷೇತ್ರದಲ್ಲಿ ಸತತ 5 ಬಾರಿ ಗೆಲುವು ಸಾಧಿಸಿದ್ದ ಮಾಜಿ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಅವರು ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಒಬ್ಬರು. ಮಾಜಿ ಸಚಿವರೂ ಆದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಪಕ್ಷದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಇನ್ನೊಂದೆಡೆ ಪಕ್ಷೇತರವಾಗಿ ಗೆಲುವು ಸಾಧಿಸಿದ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು ಬಳಿಕ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಈಗ ಇಬ್ಬರೂ ಸ್ಥಳೀಯ ಸಂಸ್ಥೆಗಳಲ್ಲಿ ಬೆಂಬಲಿಗರಿಗೆ ಸ್ಥಾನ ದೊರಕಿಸಿಕೊಡಲು ಲಾಬಿ ಪ್ರಾರಂಭಿಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಹಿಂದೆ ಬಿದ್ದಿದ್ದಾರೆ. ಬೆಂಬಲಿಗರಿಗೆ ಸ್ಥಾನ ಗಿಟ್ಟಿಸಿಕೊಳ್ಳುವುದು ಇಬ್ಬರಿಗೂ ಪ್ರತಿಷ್ಠೆಯ ವಿಷಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net