ಪುರಸಭೆ ಅಧ್ಯಕ್ಷ ಗಾದಿಗೆ ಆಕಾಂಕ್ಷಿಗಳ ಲಾಬಿ

23-GPT-1
Published on

ಗುಂಡ್ಲುಪೇಟೆ: ಪಟ್ಟಣದ ಪುರಸಭೆ ಅಧ್ಯಕ್ಷ ಗಾದಿಗೆ ಮೀಸಲು ಪ್ರಕಟವಾಗಿದ್ದು ಚುನಾವಣಾ ದಿನಾಂಕವೂ ನಿಗದಿಯಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.


ಪುರಸಭೆಗೆ ಇದೇ ಮೊದಲ ಬಾರಿಗೆ ಬಿಸಿಎಂ(ಬಿ)ಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು ಸೆ.4ರಂದು ಚುನಾವಣೆ ನಡೆಯಲಿದೆ. ಸದ್ಯ ಆಡಳಿತ ಹಿಡಿದಿರುವ ಬಿಜೆಪಿಯಲ್ಲಿ ಈ ವರ್ಗಕ್ಕೆ ಸೇರಿದ ಇಬ್ಬರು, ತಲಾ ಒಬ್ಬರು ಕಾಂಗ್ರೆಸ್ ಹಾಗೂ ಸ್ವತಂತ್ರ ಸದಸ್ಯರಿದ್ದಾರೆ. ಅಧ್ಯಕ್ಷ ಗಾದಿಗೆ ಮೀಸಲು ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದಾರೆ.


ಸದ್ಯ ಬಿಸಿಎಂ(ಬಿ) ವರ್ಗದ ಪುರಸಭೆಯ ಬಿಜೆಪಿ ಸದಸ್ಯರಾದ ನಾಗೇಶ್, ಕಿರಣ್ ಗೌಡ, ಪುರಸಭೆ ಕಾಂಗ್ರೆಸ್ ಸದಸ್ಯ ಮಧು, ಪಕ್ಷೇತರ ಸದಸ್ಯ ಪಿ.ಶಶಿಧರ್ ಅಲಿಯಾಸ್ ದೀಪು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅಧಿಕಾರ ತಮ್ಮದಾಗಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಮುಂದಾಗಿವೆ. 23 ಸದಸ್ಯ ಬಲದ ಪುರಸಭೆಯಲ್ಲಿ ಬಿಜೆಪಿ 13 ಹಾಗೂ ಕಾಂಗ್ರೆಸ್ 8 ಸ್ಥಾನಗಳನ್ನು ಹೊಂದಿವೆ. 1 ಎಸ್‌ಡಿಪಿಐ ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿ ಇದ್ದಾರೆ. ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಇಬ್ಬರು ಸದಸ್ಯರು ಪಕ್ಷದಿಂದ ಸ್ವಲ್ಪ ದೂರವಾಗಿರುವುದು ತೊಡಕಾಗುತ್ತಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿಲ್ಲದಿದ್ದರೂ ಶಾಸಕ ಹಾಗೂ ಸಂಸದರ ಎರಡು ಮತಗಳ ಜತೆ ಪಕ್ಷೇತರ ಮತ್ತು ಎಸ್‌ಡಿಪಿಐ ಬೆಂಬಲಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net