

ಕೆ.ಆರ್.ನಗರ: ಮೈಸೂರು-ಚಾಮರಾಜನಗರ ಜಿಲ್ಲಾ ಬ್ಯಾಂಕ್‌ನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸ ಸದಸ್ಯರಿಗೆ ಸಾಲ ವಿತರಿಸಲು ತೀರ್ಮಾನ ಮಾಡಲಾಗುತ್ತದೆ ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಉಪಯೋಗಕ್ಕಾಗಿ ಟ್ಯ್ರಾಕ್ಟರ್ ಮತ್ತು ಪವರ್ ಟಿಲ್ಲರ್ ಖರೀದಿಸಲು ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.
ಪಡಿತರ ವಿತರಣೆ ಜವಾಬ್ದಾರಿಯಿಲ್ಲದ ಸಂಘಗಳಿಗೆ ವಿತರಣೆ ಮಾಡಲು ಅವಕಾಶ ಕಲ್ಪಿಸಲು ನಿರ್ಧರಿಸಿದ್ದು, ಇದರಿಂದ ಸಂಘ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದೆ ಎಂದ ಅವರು, ಇನ್ನಷ್ಟು ಲಾಭ ಗಳಿಸಲು ಎಲ್ಲ ಸಂಘಗಳವರು ರಸಗೊಬ್ಬರ ಮಾರಾಟ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷ ಎಂ.ಎಸ್.ಹರಿಚಿದಂಬರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘ 2.31ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಇದರ ಪ್ರಮಾಣವನ್ನು ವೃದ್ಧಿಸಲು ಬೆಳೆ ಸಾಲವನ್ನು 12 ಕೋಟಿ ರೂ.ಗೆ ಹೆಚ್ಚಿಸಲಾಗುವುದು. ಇದರ ಜತೆಗೆ ಕೊಳವೆಬಾವಿ ಮತ್ತು ಐಪಿ ಸೆಟ್ ಸಾಲ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ತಿಳಿಸಿದರು.
ಸಂಘದ ಸಿಇಒ ಎಂ.ಆರ್.ಪ್ರೇಮಕುಮಾರ್ ವಾರ್ಷಿಕ ವರದಿ ಮತ್ತು 2025-26ನೇ ಸಾಲಿನ ಆಯವ್ಯಯವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ಉಪಾಧ್ಯಕ್ಷೆ ಎನ್.ಡಿ.ದೇವಮ್ಮ, ನಿರ್ದೇಶಕರಾದ ರಂಗೇಶ್‌ಕುಮಾರ್, ಕೆ.ವಿ.ಕೃಷ್ಣೇಗೌಡ, ಅನಿಲ್‌ರಾಜ್, ಕೆ.ಎನ್.ಕೃಷ್ಣೇಗೌಡ, ಕೆ.ಗೋಪಾಲಚಂದ್ರ, ಚಿಕ್ಕೀರೇಗೌಡ, ಕೃಷ್ಣೇಗೌಡ, ಎಂ.ಆರ್.ಮಹದೇವ, ಮಂಜಮ್ಮ, ಮೋಹನಕುಮಾರ್, ಸಿಬ್ಬಂದಿ ಎಸ್.ಪಿ.ತ್ಯಾಗರಾಜು, ಎಚ್.ವಿ.ತೇಜಶ್ವಿನಿ ಹಾಜರಿದ್ದರು.