ಜಾನುವಾರು ಚಿಕಿತ್ಸೆಗೆ ಪರದಾಟ

18-RNR-01
Published on

ರಾಣೆಬೆನ್ನೂರ: ತಾಲೂಕಿನ ಅಸುಂಡಿ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡುವಂತಾಗಿದೆ.

ಪಶು ಚಿಕಿತ್ಸಾಲಯದಲ್ಲಿ ಒಬ್ಬ ವೈದ್ಯ ಹಾಗೂ ಹೊರ ಗುತ್ತಿಗೆ ಆಧಾರದ ಮೇಲೆ ಒಬ್ಬ ನೌಕರನನ್ನು ನೇಮಕ ಮಾಡಲಾಗಿದೆ. ಆದರೆ, ವೈದ್ಯರು ಒಂದು ತಿಂಗಳಿಂದ ಸರಿಯಾಗಿ ಆಸ್ಪತ್ರೆಗೆ ಬರುತ್ತಿಲ್ಲ. ಹೀಗಾಗಿ, ಆಸ್ಪತ್ರೆ ಬಾಗಿಲು ತೆರೆದಿಲ್ಲ. ಆದ್ದರಿಂದ ಗ್ರಾಮದ ರೈತರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಖಾಸಗಿ ವೈದ್ಯರ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಗ್ರಾಮದಲ್ಲಿ ಎತ್ತು, ಎಮ್ಮೆ, ಆಕಳು, ಕುರಿ ಹಾಗೂ ಮೇಕೆ ಸೇರಿ 2 ಸಾವಿರಕ್ಕೂ ಅಧಿಕ ಜಾನುವಾರುಗಳಿವೆ. ಸದ್ಯ ಚಳಿಗಾಲ ಆಗಿರುವುದರಿಂದ ಈ ಸಮಯದಲ್ಲಿ ಜಾನುವಾರುಗಳಿಗೆ ಜ್ವರ, ನಾಲಿಗೆ ನೀಲಿಯಾಗುವುದು ಸೇರಿ ನಾನಾ ಬಗೆಯ ರೋಗಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ವೈದ್ಯರ ಅವಶ್ಯಕತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಬಂದ್ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನಾದ್ಯಂತ ಸಮಸ್ಯೆ: ಆಸ್ಪತ್ರೆ ಬಂದ್ ಆಗಿರುವ ಸಮಸ್ಯೆ ಅಸುಂಡಿ ಸೇರಿ ತಾಲೂಕಿನಾದ್ಯಂತ ಶುರುವಾಗಿದೆ. ತಾಲೂಕಿನಲ್ಲಿ ಕಳೆದ ತಿಂಗಳಿಂದ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ಅಭಿಯಾನ ನಡೆದಿದೆ. ಇದಕ್ಕಾಗಿ ಪಶು ಆಸ್ಪತ್ರೆಯ ಎಲ್ಲ ಸಿಬ್ಬಂದಿಯನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಳಸಿಕೊಳ್ಳಲಾಗುತ್ತಿದೆ. ಮಧ್ಯಾಹ್ನದ ಬಳಿಕ ವೈದ್ಯರು ಆಸ್ಪತ್ರೆಗೆ ಬರಬೇಕು ಎಂದು ಇಲಾಖೆಯಿಂದ ಸೂಚನೆಯಿದೆ. ಆದರೆ, ವೈದ್ಯರು ಹಾಗೂ ಸಿಬ್ಬಂದಿ ಮಧ್ಯಾಹ್ನದ ನಂತರ ಆಸ್ಪತ್ರೆಗೆ ಬರುತ್ತಿಲ್ಲ. ಹೀಗಾಗಿ, ತಿಂಗಳಿಂದ ಆಸ್ಪತ್ರೆಗಳು ಬಾಗಿಲು ಮುಚ್ಚಿಕೊಂಡೇ ಇರುವ ಪರಿಸ್ಥಿತಿ ನಿರ್ವಣವಾಗಿದೆ.

ಎತ್ತಿಗೆ ಜ್ವರ ಬಂದು ವಾರ ಕಳೆದಿದೆ. ಪಶು ಆಸ್ಪತ್ರೆಗೆ ತೆರೆಳಿದರೆ ವೈದ್ಯರು ಸಿಗುತ್ತಿಲ್ಲ. ಇದರಿಂದಾಗಿ, ರಾಣೆಬೆನ್ನೂರ ನಗರಕ್ಕೆ ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದೇವೆ. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಯಾರೂ ಸಿಗುತ್ತಿಲ್ಲ. ಹೀಗಿದ್ದಾಗ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು? ಆದ್ದರಿಂದ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ವೈದ್ಯರು ಬೆಳಗ್ಗೆಯಿಂದ ಸಂಜೆಯವರೆಗೆ ದೊರೆಯುವಂತೆ ಮಾಡಬೇಕು.| ಮಹೇಶಪ್ಪ, ಅಸುಂಡಿ ರೈತ

ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕಲು ಎಲ್ಲ ಆಸ್ಪತ್ರೆಯ ವೈದ್ಯ ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಅವರು ಬೆಳಗ್ಗೆ ಗ್ರಾಮೀಣ ಭಾಗದಲ್ಲಿ ಓಡಾಡುತ್ತಾರೆ. ಮಧ್ಯಾಹ್ನದ ಮೇಲೆ ಆಸ್ಪತ್ರೆಗೆ ಬರುತ್ತಾರೆ. ನ. 30ರವರೆಗೆ ಲಸಿಕಾ ಅಭಿಯಾನ ನಡೆಯಲಿದೆ. ಅಸುಂಡಿ ಸೇರಿ ಯಾವ ಆಸ್ಪತ್ರೆಗೆ ವೈದ್ಯರು ಬರುತ್ತಿಲ್ಲ ಎಂಬುದನ್ನು ಕೂಡಲೆ ಪರಿಶೀಲಿಸಿ, ಎಲ್ಲರೂ ಬರುವಂತೆ ಸೂಚಿಸಲಾಗುವುದು. | ಡಾ. ಎನ್.ಬಿ. ಅಂಗಡಿ, ತಾಲೂಕು ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net