ತಾಯಿಗೆ ಮಗನಿಂದ ಯಕೃತ್ ದಾನ: ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ

Fortis hospital
Published on

ಬೆಂಗಳೂರು: ಯಕೃತ್ ಕ್ಯಾನ್ಸರ್‌ಗೆ ಒಳಗಾಗಿದ್ದ 52 ವರ್ಷದ ತನ್ನ ತಾಯಿಗೆ ಮಗನೇ ಯಕೃತ್ ದಾನ ಮಾಡುವ ಮೂಲಕ ಮಹಿಳೆಗೆ ಮರುಜನ್ಮ ನೀಡಿದ್ದಾನೆ.

ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ಯಕೃತ್ತಿನ ಕಸಿ ಶಸಚಿಕಿತ್ಸಕ ಡಾ. ಜಿ.ಎಸ್.ಬಿ. ಕಿಶೋರ್ ಮತ್ತು ಡಾ. ಪಿಯೂಷ್ ಸಿನ್ಹಾ ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಬಿ.ಎಸ್. ರವೀಂದ್ರ ಅವರನ್ನು ಒಳಗೊಂಡ ತಂಡ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನಡೆಸಿದೆ.

ಈ ಕುರಿತು ಡಾ. ಜಿ.ಎಸ್. ಬಿ. ಕಿಶೋರ್ ಮಾತನಾಡಿ, ಕಸಿ ಶಸಚಿಕಿತ್ಸೆಗೆ ಒಳಗಾದ ಮಹಿಳೆ ಲೀಲಾ ಎಂಬುವವರು 2021 ರಲ್ಲಿ ಕಾಮಾಲೆ ಕಾಯಿಲೆಗೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರಿಗೆ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಯಿತು. ಬಳಿಕ ಅವರು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ದೀರ್ಘಕಾಲದಿಂದ ಯಕೃತ್‌ನ ಕಾಯಿಲೆ ಇರುವ ಕಾರಣ ಅವರ ಯಕೃತ್‌ನಲ್ಲಿ ದ್ರವದ ಶೇಖರಣೆಯಾಗಿ ಯಕೃತ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದ ಅವರ ಜೀವನ ಶೈಲಿಯ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿತ್ತು ಎಂದು ತಿಳಿಸಿದರು.

ಹಾಗಾಗಿ ಅವರನ್ನು ಮತ್ತಷ್ಟು ತಪಾಸಣೆಗೆ ಒಳಪಡಿಸಿದ ಬಳಿಕ ಪಿತ್ತರಸ ನಾಳದಲ್ಲಿ ಕಲ್ಲು ಇರುವುದು ಪತ್ತೆಯಾಯಿತು. ಗ್ಯಾಸ್ಟ್ರೋ ತಂಡವು ಈ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ವೇಳೆ ಆಕೆಗೆ ಯಕೃತ್‌ನ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿರುವುದು ಸಹ ತಿಳಿದುಬಂತು. ಹೀಗಾಗಿ ಆಕೆಗೆ ತುರ್ತು ಯಕೃತ್ ಕಸಿ ಅಗತ್ಯತೆ ಇತ್ತು. ಅವರ ಮಗನೇ ತನ್ನ ಯಕೃತ್‌ನ ಭಾಗವನ್ನು ದಾನ ಮಾಡಲು ಮುಂದಾದರು. ಸಕಾಲದಲ್ಲಿ ಯಕೃತ್ ಸಿಕ್ಕ ಪರಿಣಾಮ ಕಸಿ ಶಸಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ವಿವರಿಸಿದರು.

ದಾನಿಯ ಯಕೃತ್ತಿನ ಉಳಿದ ಭಾಗವು ತಕ್ಷಣವೇ ಪುನರುತ್ಪಾದಿಸಲು ಪ್ರಾರಂಭಿಸುತ್ತದೆ. ಆರರಿಂದ ಎಂಟು ವಾರಗಳಲ್ಲಿ ಅದರ ಸಾಮಾನ್ಯ ಗಾತ್ರಕ್ಕೆ ಯಕೃತ್ ಬೆಳೆಯುತ್ತದೆ. ಹೆಚ್ಚಿನ ಯಕೃತ್ ದಾನಿಗಳು ಶಸ್ತ್ರಚಿಕಿತ್ಸೆಯ ಒಂದು ವಾರದ ನಂತರ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net