ತಲೆ ಹೊಕ್ಕಿ ಜೀವಂತವಾಗಿದ್ದ ಹುಳು! ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

BOT Fly
Published on

ಬೆಂಗಳೂರು: ಅಮೇಜಾನ್ ಅರಣ್ಯಕ್ಕೆ ಹೋಗಿದ್ದಾಗ 26 ವರ್ಷದ ಯುವತಿಯ ತಲೆ ಹೊಕ್ಕಿದ್ದ ಬಾಟ್ ಫ್ಲೈ ಲಾರ್ವವನ್ನು (ಒಂದು ಬಗೆಯ ಹುಳು) ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ರಾಜಧಾನಿಯ ಖಾಸಗಿ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.

ಯುವತಿಯು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಲೆಯಲ್ಲಿ ಊತ ಸಮಸ್ಯೆಗೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಆಗಮಿಸಿದ್ದರು. ಈ ಕುರಿತು ವೈದ್ಯರು ಸೂಕ್ಷ್ಮವಾಗಿ ಪರೀಕ್ಷೆ ನಡೆಸಿದಾಗ ರೋಗಿಯು ‘ಮಯಾಸಿಸ್’ ತೊಂದರೆಯಿಂದ ಬಳಲುತ್ತಿದ್ದುದನ್ನು ತಿಳಿದು, ಶಸ್ತ್ರಚಿಕಿತ್ಸೆಗೆ ಒಳಪಡಿಸಿ ತಲೆಯ ಚರ್ಮದ ಒಳಗಿದ್ದ ಹುಳುವನ್ನು ಹೊರತೆಗೆದಿದ್ದಾರೆ.

ಈ ಚಿಕಿತ್ಸೆಯಿಂದ ರೋಗಿಗೆ ಯಾವುದೇ ಸಂಕೀರ್ಣ ತೊಂದರೆಗಳು ಆಗಿಲ್ಲ. ಸೂಕ್ಷ್ಮರೀತಿಯಲ್ಲಿ ಶಸಚಿಕಿತ್ಸೆ ನಡೆಸಿ ಬಾಟ್ ಫ್ಲೈಯನ್ನು ಹೊರತೆಗೆಯಲಾಗಿದ್ದು, ರೋಗಿ ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದ್ದರೂ ಇಂತಹ ಚಿಕಿತ್ಸೆಯಲ್ಲಿ ತಪ್ಪಾಗಿ ರೋಗನಿರ್ಣಯ ಮಾಡಿದಲ್ಲಿ ಅಪಾಯ ಹೆಚ್ಚು. ಅಲ್ಲದೆ ಈ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ ಎಂದು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಸಲಹಾ ತಜ್ಞ ಡಾ. ರಾಘವೇಂದ್ರ ಕಲಾದಗಿ ಹೇಳಿದ್ದಾರೆ.

ಅಮೆರಿಕದ ಪರಿಸರ ಸಂಬಂಧಿತ ಪ್ರವಾಸಿ ತಾಣಗಳು, ಅಮೇಜಾನ್ ಕಾಡುಗಳಂತಹ ಸ್ಥಳಗಳಿಗೆ ಪ್ರಯಾಣ ಬೆಳೆಸುವವರು ಈ ತೊಂದರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಬಟ್ಟೆ ಧರಿಸಬೇಕು. ಕೀಟಗಳನ್ನು ದೂರವಿಡುವಂತಹ ಔಷಧಗಳನ್ನು ಬಟ್ಟೆಯಮೇಲೆ ಸಿಂಪಡಿಸಿಕೊಳ್ಳಬೇಕು. ಭಾರತದಲ್ಲಿ ಇವು ಕಾಣಿಸುವುದಿಲ್ಲ ಎಂದು ಚರ್ಮರೋಗ ತಜ್ಞೆ ಡಾ. ನೀಮಾ ಸಾಂಡ್ರಾ ಡಯಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net