ಶಿಕ್ಷಣ ಸಂಸ್ಥೆಗಳು ಸಮಾಜಮುಖಿಯಾಗಿ ಸೇವೆ ಸಲ್ಲಿಸಲಿ : ಮಾಜಿ ಉಪ ಮಹಾಪೌರ ಶಿವಾನಂದ ಪಿಸ್ತಿ ಅಭಿಪ್ರಾಯ

p1 (1)
Published on

ಜೆ.ಆರ್. ನಗರದ ಲಿಟ್ಲ್ ಲ್ಯಾಂಪ್ಸ್ ಶಾಲೆಯ ವಾರ್ಷಿಕೋತ್ಸವ

ಕಲಬುರಗಿ: ದೇಶದ ಭವಿಷ್ಯ ನಿರ್ಮಿಸುವ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣವಾಗಿರುವುದು ನಿಜಕ್ಕೂ ವಿಷಾದನೀಯವಾಗಿದೆ. ಶಿಕ್ಷಣ ಸಂಸ್ಥೆಗಳು ಡೋನೆಷನ್ ಪಡೆದು ಉಳ್ಳವರ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿ ಬಡವರು, ಅಸಹಾಯಕರ ಮಕ್ಕಳಿಗೂ ಕೂಡಾ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಮುಖಿಯಾಗಿ ಸೇವೆ ಸಲ್ಲಿಸುವುದು ಪ್ರಸ್ತುತ ಸಂದರ್ಭಗಳಲ್ಲಿ ಅವಶ್ಯಕವಾಗಿದೆ ಎಂದು ಮಾಜಿ ಉಪ ಮಹಾಪೌರ ಶಿವಾನಂದ ಪಿಸ್ತಿ ಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ಜೆ.ಆರ್. ನಗರದ ಹನುಮಾನ ದೇವಸ್ಥಾನದ ಆವರಣದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ‘ಲಿಟ್ಲ್ ಲ್ಯಾಂಪ್ಸ್ ಶಾಲೆ’ಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಎಷ್ಟೇ ಅಂಕಗಳು, ಪದವಿ ಗಳಿಸಿ, ಸಂಸ್ಕಾರ, ಮಾನವೀಯ ಮೌಲ್ಯಗಳಿಲ್ಲದಿದ್ದರೆ ಪ್ರಯೋಜನವಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇವುಗಳು ನಿಮ್ಮ ಜೀವನ ಸುಂದರವಾಗಿಸಲು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಕರು, ಪಾಲಕ-ಪೋಷಕರು ಚಿತ್ತ ಹರಿಸಬೇಕಾಗಿದೆ. ಪಾಲಕ-ಪೋಷಕರು ತಮ್ಮ ಮಕ್ಕಳ ಆಸಕ್ತಿಯನ್ನು ಗಮನಿಸಿ, ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅವರ ಮೇಲೆ ಅಧ್ಯಯನ, ಕೋರ್ಸ್ ಆಯ್ಕೆಯ ಬಗ್ಗೆ ಒತ್ತಡ ಬೇಡ ಎಂದರು.

ಚಿಂತಕ ಸಂತೋಷ ಹೂಗಾರ ಮಾತನಾಡಿ, ವಿದ್ಯಾರ್ಥಿಗಳು ನಿಗದಿತ ಗುರಿಯನ್ನಿಟ್ಟುಕೊಂಡು ಅದಕ್ಕೆ ಪೂರಕವಾಗಿ ಶಿಸ್ತು, ಸಮಯ ಪ್ರಜ್ಞೆ, ದೃಢ ಸಂಕಲ್ಪ, ನಿರಂತರ ಅಧ್ಯಯನ. ಧನಾತ್ಮಕ ಚಿಂತನೆಯೊAದಿಗೆ ನಿರಂತರವಾಗಿ ಪ್ರಯತ್ನಿಸಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಅಣ್ಣಾರಾವ ಪಾಟೀಲ ಝಾಪುರ, ಶರಣಪ್ಪ ಮಳ್ಳಿ, ಅನಿಲ ಎಂ.ರಾಮಶೆಟ್ಟಿ, ಬಾಬುರಾವ ಹೊಳ್ಳಿ, ಶೈಲಜಾ, ರಾಚಪ್ಪ ಗೋಗಿ, ಚನ್ನಪ್ಪ ನೆಲೋಗಿ, ಮಹೇಶ ಟಿ.ಸಣಮನಿ, ಸಿದ್ದು ಪೂಜಾರಿ, ಮಹದೇವಪ್ಪ ಹಳ್ಳಿಖೇಡ, ರಾಜಶೇಖರ ಲಾವಣಿ, ಸುವರ್ಣಾ ವಾಗೆ, ನಾಗರಾಜ ಮುಲಗೆ, ಸಂಸ್ಥೆಯ ಅಧ್ಯಕ್ಷೆ ರಾಜೇಶ್ವರಿ ಎನ್.ಮುಲಗೆ, ಸದಸ್ಯೆಯರಾದ ಅಕ್ಷತಾ ಎನ್.ಮುಲಗೆ, ಮಾನಸ ಎನ್.ಮುಲಗೆ, ಅನನ್ಯ ಎನ್.ಮುಲಗೆ ಹಾಗೂ ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು, ಪಾಲಕ-ಪೋಷಕರು, ಬಡಾವಣೆಯ ನಾಗರಿಕರು, ಇನ್ನಿತರರು ಭಾಗವಹಿಸಿದ್ದರು.

ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net