

ದೇವದುರ್ಗ: ನಾಡು, ನುಡಿ, ನೆಲ ಜಲದ ಬಗ್ಗೆ ಜನ ಜಾಗೃತಿ ಮೂಡಿಸಿ ಓದುವ ಹವ್ಯಾಸ ಬೆಳೆಸುವಂಥ ಸಾಹಿತ್ಯ ಚಟುವಟಿಕೆಗಳು ಹರಿವ ನೀರಿನಂತೆ ನಿರಂತರವಾಗಿ ಸಾಗಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಇದನ್ನೂ ಓದಿ:ವಚನ ಸಾಹಿತ್ಯ ಪ್ರಪಂಚದಲ್ಲಿ ಮತ್ತೆಲ್ಲಿಯೂ ಇಲ್ಲ
ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಚುಟುಕು ಸಾಹಿತ್ಯ ಪರಿಷತ್‌ನಿ ತಾಲೂಕು ಘಟಕ ಆಯೋಜಿಸಿದ್ದ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಚುಟುಕು ಎಂದರೆ ಸಂಕ್ಷಿಪ್ತ ಅರ್ಥಗರ್ಭಿತವಾದ ಮತ್ತು ಓದುಗರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರುವಂತಹ ಸಾಹಿತ್ಯ. ಇದು ಸಾಮಾನ್ಯವಾಗಿ ನಾಲ್ಕು ಸಾಲುಗಳನ್ನು ಒಳಗೊಂಡಿರುತ್ತದೆ. ಇದೇ ನಾಲ್ಕು ಸಾಲಿನಲ್ಲಿ ಜೀವನದ ಪ್ರಮುಖ ಅಂಶಗಳಾದ ಪ್ರೀತಿ, ದುಃಖ, ಹಾಸ್ಯ, ವಿಡಂಬನೆ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಚುಟುಕು ಕಾವ್ಯಕ್ಕೂ ಸುದೀರ್ಘ ಇತಿಹಾಸವಿದೆ. ಶಿಲಾ ಲಿಪಿಗಳಲ್ಲಿ, ವಚನಗಳಲ್ಲಿ ಶರಣರು, ದಾಸರು ನಂತರದಲ್ಲಿ ತ್ರಿಪದಿಯ ಸರ್ವಜ್ಞ ಮೇರು ಚುಟುಕು ಸಾಹಿತ್ಯ ರಚಿಸಿದ್ದಾರೆ ಎಂದರು.
ಆಧುನಿಕ ಸಾಹಿತ್ಯದಲ್ಲಿ ಕುವೆಂಪು, ಯು.ಆರ್.ಅನಂತಮೂರ್ತಿ, ಸಿ.ಪಿ.ಕೃಷ್ಣಕುಮಾರ್, ದುಂಡಿರಾಜ್, ಜರಗನಹಳ್ಳಿ ಶಿವಶಂಕರ್, ಅಕ್ಬರ್ ಆಲಿ ಒಳಗೊಂಡಂತೆ ಹಲವಾರು ಕವಿಗಳು ಅದ್ಭುತವಾದ ಚುಟುಕು ಸಾಹಿತ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯದ ಸತ್ವವನ್ನು ಗಟ್ಟಿಗೊಳಿಸಿದ್ದಾರೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಚುಟುಕು ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಯುವಕರು ಚುಟುಕು ಸಾಹಿತ್ಯ ಅಧ್ಯಯನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆಮ್ಮ ನಾಯಕ ಹೇಳಿದರು.
ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಪರಿಷತ್ ಜಿಲ್ಲಾಧ್ಯಕ್ಷ ನರಸಿಂಗ್‌ರಾವ್ ಸರ್ಕೀಲ್, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಮದರಕಲ್, ಸಾಹಿತಿ ಶಂಕರರಾವ್ ಉಭಾಳೆ, ಉದ್ಯಮಿ ಭಾನುಪ್ರಕಾಶ ಖೇಣೇದ್, ತಾಪಂ ಇಒ ಬಸವರಾಜ ಹಟ್ಟಿ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ್, ಪ್ರಮುಖರಾದ ಬೀರಪ್ಪ ಸಂಭೋಜಿ, ಚನ್ನವೀರಯ್ಯಸ್ವಾಮಿ ಹಿರೇಮಠ ಇತರರಿದ್ದರು.