ವಚನ ಸಾಹಿತ್ಯ ಪ್ರಪಂಚದಲ್ಲಿ ಮತ್ತೆಲ್ಲಿಯೂ ಇಲ್ಲ

29
Published on

ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಸೋಮಶೇಖರ ಅಭಿಮತ, ಪದಾಧಿಕಾರಿಗಳ ಸೇವಾ ಪದವಿ ಸ್ವೀಕಾರ

ತುಮಕೂರು: ಹನ್ನೆರಡನೇ ಶತಮಾನದ ಶರಣರ ಅನುಭಾವದ ಸೂಳ್ನುಡಿಯೇ ವಚನ ಸಾಹಿತ್ಯ. ಶರಣರ ವಚನ ಸಾಹಿತ್ಯ ವಿಶ್ವದಲ್ಲಿ ಮತ್ತೆಲ್ಲಿಯೂ ಇಲ್ಲ. ವಚನ ಸಾಹಿತ್ಯದ ಸಿದ್ಧಾಂತ ವಿಶ್ವಕ್ಕೆ ಶರಣರು ಕೊಟ್ಟ ಮಾನವೀಯ ಸಂವಿಧಾನ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.

ಅಖಿಲ ಭಾರತ ಶಸಾಪ, ಜಿಲ್ಲಾ ಶಸಾ ವತಿಯಿಂದ ನಗರದ ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ ತುಮಕೂರು ಜಿಲ್ಲಾ ಯುವ ಘಟಕ ನೂತನ ಪದಾಧಿಕಾರಿಗಳ ಸೇವಾ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಚನ ದಿನನಿತ್ಯದ ಬದುಕಿನ ತಲ್ಲಣಗಳ ಸಮಸ್ಯೆ, ಸವಾಲುಗಳ ನಡುವೆ ಶರಣರು ಆತ್ಮಕಲ್ಯಾಣದ ಜತೆಗೆ ಲೋಕಕಲ್ಯಾಣ ಮಾಡುವ ದಿಸೆಯಲ್ಲಿ ಅಂತರಂಗದ ಅನುಭಾವದಲ್ಲಿ ಅರಳಿದ ಸಾಹಿತ್ಯ. ಶರಣ ಸಾಹಿತ್ಯ ಪರಿಷತ್​ ಉದ್ದೇಶ ವಚನ ಸಾಹಿತ್ಯ ವಿಶ್ವದಾದ್ಯಂತ ಪ್ರಸಾರ ಮಾಡಬೇಕು ಎಂಬುದಾಗಿದೆ ಎಂದರು.

ಶರಣ ಸಾಹಿತ್ಯ ಪರಿಷತ್​ ನಂತರ ಕದಳಿ ಮಹಿಳಾ ಘಟಕ ಅನಂತರ ಯುವಘಟಕ ಪ್ರಾರಂಭ ಮಾಡಬೇಕೆಂಬ ಇಚ್ಛೆಯಿಂದ ಇಂದು ಆರಂಭಿಸುತ್ತಿದ್ದೇವೆ. ಸಂಜನ್​ ನಾಗರಾಜ್​ ವಹಿಸಿಕೊಂಡಿರುವುದು ಅಧಿಕಾರವಲ್ಲ, ಅದು ಸೇವಾ ದೀಕ್ಷೆ. ಇಂದಿನ ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ಮಾಡಿದರೆ ಅವರಿಗೆ ಒಳ್ಳೆಯ ಭವಿಷ್ಯವಿದೆ. ಭಾರತದಲ್ಲಿ ಇಂದು ಶೇ.70ರಷ್ಟು ಯುವಜನತೆ ಇದ್ದು, ಯುವಕರು ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದರು.

ಬೆಳ್ಳಾವಿ ಶ್ವೇತ ಕಮಠಾಪುರಿ ಜಂಗಮ ಸುಕ್ಷೇತ್ರದ ಶ್ರೀ ಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ವಚನಕಾರರು 20ನೇ ಶತಮಾನಕ್ಕೆ ಸರಿಯಾದ ವಚನಗಳನ್ನು 800 ವರ್ಷಗಳ ಹಿಂದೆಯೇ ರಚಿಸಿ ಹೋಗಿದ್ದಾರೆ. ಇಂದು ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ಮರಣ ಹೊಂದುತ್ತಿದ್ದಾರೆ. ಬಸವಣ್ಣ ಹೇಳಿರುವಂತೆ ನಮ್ಮ ದೇಹವೇ ದೇಗುಲವಾಗಿರಬೇಕು.

ಅಂದರೆ ದೇಗುಲದಂತೆ ದೇಹ ಶುದ್ಧವಾಗಿಡಬೇಕು ಎಂದರು.

ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ಧಲಿಂಗಪ್ಪ ಮಾತನಾಡಿ, ಶರಣರು ರಚಿಸಿದ ವಚನಗಳನ್ನು ಹಿರಿಯರಾದ ನಾವು ಅಧ್ಯಯನ ಮಾಡಿ ಮಕ್ಕಳಿಗೆ ಪರಿಚಯಿಸಬೇಕು ಎಂದರು.

ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಲಿಂಗಮ್ಮ, ರಾಜ್ಯ ಯುವ ಘಟಕದ ಸಂಚಾಲಕ ಯಾದಗಿರಿ ಎಸ್​.ಪ್ರಕಾಶ್​, ಅಂಗಡಿಯವರು ಯುವ ಘಟಕದ ಅಧ್ಯಕ್ಷ ಸಂಜನ್​ ನಾಗರಾಜ್​ ಹಾಗೂ ಸದಸ್ಯರಿಗೆ ಸೇವಾದೀಕ್ಷೆ ಬೋಧಿಸಿದರು.ತುಮಕೂರು ಯುವ ಘಟಕದ ಅಧ್ಯಕ್ಷ ಸಂಜನ್​, ನಾಗರಾಜ್​, ಭಾಗ್ಯಲಕ್ಷಿ$್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net