

ತುಮಕೂರು: ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ.75.14ರಷ್ಟಿದ್ದು ಈ ಪ್ರಮಾಣವನ್ನು ಶೇ.100ಕ್ಕೆ ಕೊಂಡೊಯ್ಯಲು ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸುವಂತೆ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ ಹೇಳಿದರು.
ನಗರ ಜಿಪಂ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,ದೇಶದ ಅಭಿವೃದ್ಧಿಗೆ ಸಾಕ್ಷರತೆ ಪೂರಕವಾಗಿರುತ್ತದೆ ಎಂದರು.
ಮೊಟ್ಟ ಮೊದಲ ಬಾರಿಗೆ ಯುನೆಸ್ಕೊದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು. ಪ್ರಸಕ್ತ 2024ರ ಸಾಕ್ಷರತಾ ದಿನಚರಣೆಯನ್ನು ಬಹು ಭಾಷೆಗಳ ಮೂಲಕ ಸಾಕ್ಷರತೆಯ ಉತ್ತೇಜನ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಸಾಕ್ಷರತೆಯಿಂದ ನಮ್ಮಲ್ಲಿರುವ ಜ್ಞಾನವೃದ್ಧಿಯಾಗುವುದಲ್ಲದೆ, ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ನಿವಾರಿಸಬಹುದಾಗಿದೆ ಎಂದು ತಿಳಿಸಿದರು.
ಸಾಕ್ಷರತೆಯಿಂದ ಅನಕ್ಷರಸ್ಥರಲ್ಲಿ ಸ್ವಾವಲಂಬನೆ ಹೆಚ್ಚುತ್ತದೆ. ಸಂವಿಧಾನದಲ್ಲಿ ಕಲ್ಪಿಸಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡುತ್ತದೆ. ಜಿಲ್ಲೆಯಲ್ಲಿ ಶೇ.85.70 ಪುರುಷರು ಹಾಗೂ ಶೇ.67.38 ಮಹಿಳೆಯರು ಸೇರಿದಂತೆ ಒಟ್ಟು ಶೇ.75.14ರಷ್ಟಿರುವ ಸಾಕ್ಷರತಾ ಪ್ರಮಾಣವನ್ನು ಶೇ.100ಕ್ಕೆ ಕೊಂಡೊಯ್ಯಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಿದರು.
ಜಿಲ್ಲಾ ಶಿಕ್ಷಣಾಧಿಕಾರಿ ನರಸಿಂಹಯ್ಯ ಸಾಕ್ಷರತಾ ಪ್ರಮಾಣ ವಚನವನ್ನು ಬೋಧಿಸಿದರು. ಡಯಟ್ ಉಪನಿರ್ದೇಶಕ ಕೆ.ಮಂಜುನಾಥ್, ಇಒ ಮಾಧವರೆಡ್ಡಿ, ಡಿಇಒ ಲಕ್ಷ್ಮೀಜನಾರ್ಧನ್, ಬಿಇಒ ಹನುಮಂತಯ್ಯ, ನೋಡಲ್ ಅಧಿಕಾರಿ ಹಾಗೂ ಡಯಟ್ ಹಿರಿಯ ಉಪನ್ಯಾಸಕ ಎನ್. ನಂಜುಂಡಯ್ಯ , ಶ್ರೀರಂಗರಾಜು, ಸಹಾಯಕ ಅಧಿಕಾರಿ ಸಿ.ಎಂ. ಲಕ್ಷ್ಮೀ ಮತ್ತಿತರರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರತಂದಿರುವ ಎಲ್ಲರಿಗೂ ಶಿಕ್ಷಣ ಕುರಿತಾದ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.