

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಳೆದ ಕೆಲವು ವರ್ಷಗಳಿಂದ ಪರಿಹಾರವಾಗದೆ ಇರುವ ಕಿನ್ನಿಗೋಳಿ ದ್ರವ ತ್ಯಾಜ್ಯ ಘಟಕಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿದರು.
ಘಟಕ ಸಮೀಪದಲ್ಲಿನ ಹಲವು ಮನೆಗಳಿಗೆ ಬಹಳಷ್ಟು ತೊಂದರೆ ಆಗುತ್ತಿದ್ದು, ಈ ಬಗ್ಗೆ ಅನೇಕ ಬಾರಿ ಸ್ಥಳಿಯಾಡಳಿತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದ ನಮಗೆ ಬದುಕಲು ಕಷ್ಟವಾಗುತ್ತಿದೆ. ವಸತಿ ಸಮುಚ್ಚಯದ ಶೌಚಗೃಹದ ನೀರು ನೇರವಾಗಿ ಬಿಡುತ್ತಾರೆ ಎಂದು ಸ್ಥಳಿಯರು ಆರೋಪಿಸಿದರು.
ಎರಡೂ ಕಡೆಯ ಜನರ ಸಮಸ್ಯೆ ಆಲಿಸಿದ ಶಾಸಕ ಉಮಾನಾಥ ಕೊಟ್ಯಾನ್, ಅವರವರ ತ್ಯಾಜ್ಯವನ್ನು ಅವರೇ ವಿಲೇವಾರಿ ಮಾಡಬೇಕಾಗಿದೆ. ಮತ್ತೆ ಅಂಗಡಿ ಮುಂಗಟ್ಟುಗಳ ತ್ಯಾಜ್ಯ ನೀರು ಬಿಟ್ಟರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
10 ವರ್ಷಗಳ ಹಿಂದೆ ಕಿನ್ನಿಗೋಳಿಯಲ್ಲಿ ಗ್ರಾಮ ಪಂಚಾಯಿತಿ ಇರುವಾಗಲೇ ಈ ಘಟಕ ಪ್ರಾರಂಭವಾಗಿದ್ದು, ಉತ್ತಮ ಯೋಜನೆಯಾಗಿತ್ತು. ದ್ರವ ತ್ಯಾಜ್ಯಕ್ಕೆ ಶಾಶ್ವತ ಪರಿಹಾರಕ್ಕಾಗಿ ಕಿನ್ನಿಗೋಳಿಯ ಹೋಟೆಲ್, ಬಾರ್ ಮಾಲೀಕರು ಇದಕ್ಕೆ ಇಂತಿಷ್ಟು ಮೊತ್ತ ನೀಡುತ್ತಿದ್ದರು. ಆದರೆ ಆಗಿನ ಗ್ರಾಪಂ ಆಡಳಿತದ ರ್ನಿಲಕ್ಷ ಮತ್ತು ಸರಿಯಾದ ಭವಿಷ್ಯದ ಯೋಜನೆ ಇಲ್ಲದ ಕಾರಣ ಇದೀಗ ಸಮಸ್ಯೆ ಉದ್ಭವವಾಗಿದೆ.
ಉದ್ಯಮಿಗಳಿಂದ ಹಣ ವಸೂಲಿ
ಈ ದ್ರವ ತ್ಯಾಜ್ಯ ಘಟಕಕ್ಕೆ ಆಗಿನ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸ್ಥಳಿಯ ಉದ್ಯಮಿಗಳಿಂದ ಹಣ ಪಡೆದಿದೆ. ಆದರೆ ಇದಕ್ಕೆ ಸರಿಯಾದ ರಶೀದಿ ನೀಡಿಲ್ಲ ಹಾಗೂ ಸರಿಯಾದ ಘಟಕವೂ ನಿರ್ಮಿಸಿಲ್ಲ. ಇದೀಗ ಸ್ಥಳಿಯರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.