

ಬೇಲೂರು: ಅರೇಹಳ್ಳಿಯಲ್ಲಿ ಲಯನ್ಸ್ ಸಂಸ್ಥೆಯಲ್ಲಿ ಪ್ರಸ್ತುತ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸಂಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪ್ರಾಂತಪಾಲೆ ಬಿ.ಎಂ.ಭಾರತಿ ಹೇಳಿದರು.
ತಾಲೂಕಿನ ಅರೇಹಳ್ಳಿಯ ಲಯನ್ಸ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಸಂಸ್ಥೆ ಸ್ಥಾಪಿಸಬೇಕಾದರೆ ಕನಿಷ್ಠ 20 ಸದಸ್ಯರು ಇರಬೇಕಾಗುತ್ತದೆ. ಜತೆಗೆ ಅವರೆಲ್ಲ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದರೆ ನಿಸ್ಸಂದೇಹವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಅರೇಹಳ್ಳಿ ಕ್ಲಬ್ ಯಶಸ್ಸಿನತ್ತ ಸಾಗುತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯತ್ತ ಸಾಗಲಿ ಎಂದು ಶುಭ ಹಾರೈಸಿದರು.
ಲಯನ್ಸ್ ಸಂಸ್ಥೆ ಪ್ರಾಂತೀಯ ಅಧ್ಯಕ್ಷ ರಾಬಿ ಸೋಮಯ್ಯ ಮಾತನಾಡಿ, ಕಳೆದ ಸಾಲಿನಿಂದ ಇಲ್ಲಿಯವರೆಗೆ ಸಂಸ್ಥೆ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಅದರಲ್ಲೂ ಭತ್ತದ ನಾಟಿ, ಕೊಯ್ಲು ಮಾಡುವಲ್ಲಿ ಸಂಸ್ಥೆಯ ಸದಸ್ಯರು ಒಗ್ಗೂಡಿ ಮನೆ ಸದಸ್ಯರಂತೆ ತೊಡಗಿಸಿಕೊಂಡಿದ್ದು, ಖುಷಿ ನೀಡಿದೆ ಎಂದರು.
ಇದೇ ಸಂದರ್ಭ ರಾಜ್ಯಮಟ್ಟದ ಖೇಲೋ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದ ಅರೇಹಳ್ಳಿ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಜಾಯಸ್ಟನ್ ಡಿಸೋಜಾ ಅವರನ್ನು ಅಭಿನಂದಿಸಲಾಯಿತು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಸಂತೋಷ್ ಕುಮಾರ್, ಖಜಾಂಚಿ ಬೃಂದನ್, ಕಾರ‌್ಯದರ್ಶಿ ಪೃಥ್ವಿರಾಜ್, ವಲಯಾಧ್ಯಕ್ಷ ಲತೀಫ್, ಹಾಸನ ಲಯನ್ಸ್ ಸಂಸ್ಥೆಯ ಚಂದ್ರೇಗೌಡ ಇತರರಿದ್ದರು.