

ತುಮಕೂರು: ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಹೋರಾಟದಲ್ಲಿ ಭಾಗಿಯಾಗಿದ್ದ ಮಠಾಧೀಶರ ಮೇಲಿನ ಎಫ್ಐಆರ್ ರದ್ದು ಪಡಿಸುವಂತೆ ಮಾಜಿ ಸಚಿವ ಸೊಗಡುಶಿವಣ್ಣ ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದಲ್ಲೇ ಉಪವಾಸ ಸತ್ಯಾಗ್ರಹ ನಡೆಸಿದ ಪ್ರಹಸನ ನಡೆಯಿತು. ಯಾವುದೇ ಅನುಮತಿ ಇಲ್ಲದೇ ಏಕಾಏಕಿ ಚಾಪೆ-ದಿಂಬಿನ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದ ಬಳಿ ಮೌನ ಪ್ರತಿಭಟನೆಗೆ ಕುಳಿತ ಸೊಗಡು "ಗಾಂಧಿಗಿರಿ'ಗೆ ಜಿಲ್ಲಾಡಳಿತಕ್ಕೆ ತಲೆಬಿಸಿಯಾಯಿತು.
ಬೆಳಗ್ಗೆ 11ಕ್ಕೆ ಸುದ್ದಿಗೋಷ್ಠಿ ಮುಗಿಸಿ ನೇರವಾಗಿ ಚಾಪೆ ದಿಂಬು ಹಿಡಿದು ಜಿಲ್ಲಾಧಿಕಾರಿ ಕಚೇರಿಯತ್ತ ಧಾವಿಸಿದ ಶಿವಣ್ಣ ಮುಖ್ಯದ್ವಾರದ ಬಳಿಯೇ ಚಾಪೆ ಹಾಸಿ ಧರಣಿಗೆ ಕುಂತೇಬಿಟ್ಟರು. ಸುದ್ದಿತಿಳಿಯುತ್ತಿದಂತೆ ಸ್ಥಳಕ್ಕೆ ದೌಡಾಯಿಸಿ ಪೊಲೀಸ್ ಅಧಿಕಾರಿಗಳು ಮಧ್ಯಾಹ್ನದವರೆಗೆ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರಾದರು ಯಾವುದೇ ಪ್ರಯತ್ನ ಕೈಗೂಡಲಿಲ್ಲ. ಹೋರಾಟ ಬೆಂಬಲಿಸಿ ಮತ್ತಷ್ಟು ಜನ ಜತೆಗೂಡಿದರು. ಪೊಲೀಸರಿಗೆ ಮೇಲಿಂದ ಮೇಲೆ ಒತ್ತಡ ಬಂದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರತಿಭಟನಾನಿರತರನ್ನು ತೆರವುಗೊಳಿಸಬೇಕಾಯಿತು.
ಅನಾಮತ್ತಾಗಿ ಎತ್ತಿದ ಪೊಲೀಸರು: ಹನಿ ನೀರು ಸೇವಿಸದೆ ಧರಣಿ ಕುಳಿತಿದ್ದ ಸೊಗಡು ಶಿವಣ್ಣ ಮಧ್ಯಾಹ್ನದ ಹೊತ್ತಿಗೆ ಸುಸ್ತಾದಂತೆ ಕಂಡುಬಂದರು. ಸ್ಥಳಕ್ಕೆ ನರ್ಸ್ಗಳನ್ನು ಕರೆಸಿ ಆರೋಗ್ಯ ತಪಾಸಣೆಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಎಎಸ್ಪಿ ಪುರುಷೋತ್ತಮ್ ಹೇಳುತ್ತಿದ್ದಂತೆ ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಅನಾಮತ್ತಾಗಿ ಶಿವಣ್ಣರನ್ನು ಎತ್ತಿಕೊಂಡು ಜೀಪ್ನಲ್ಲಿ ಕೂರಿಸಿ, ಸ್ಥಳದಲ್ಲಿದ್ದವರು ಹೊರಕಳುಹಿಸಿದರು.
ಅಲ್ಲಿಂದ ಹೊರಟ ಪೊಲೀಸ್ ಜೀಪ್ ನೇರವಾಗಿ ಬೆಳ್ಳಾವಿ ಠಾಣೆ ಮುಂದೆ ಬಂದು ನಿಂತಿತು. ಇದರಿಂದ ಕುಪಿತರಾದ ಶಿವಣ್ಣ ಠಾಣೆಯಲ್ಲಿ ನೆಲದ ಮೇಲೆ ಕುಳಿತು ಅಲ್ಲಿಯು ಕೂಡ ಅನ್ನ, ನೀರು ಸೇವಿಸದೆ ಧರಣಿ ಕುಳಿತರು. ಪೊಲೀಸರು ಮತ್ತಷ್ಟು ವಿಚಲಿತರಾದರು. ಈ ವೇಳೆ ಮಠಾಧೀಶರ ಹೆಸರನ್ನು ಎಫ್ಐಆರ್ ನಿಂದ ಕೈಬಿಡುವಂತೆ ಪಟ್ಟುಹಿಡಿದರು.
ಎಂಟಿಕೆ, ಸುರೇಶಗೌಡ ಭೇಟಿ: ಗಾಂಧಿಗಿರಿ ಪ್ರಹಸನದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಮತ್ತಿತರರು ಬೆಳ್ಳಾವಿ ಠಾಣೆಗೆ ತೆರಳಿ "ಎಕ್ಸ್ಪ್ರೆಸ್ ಕೆನಾಲ್ ಲಿಂಕ್' ವಿರುದ್ಧದ ಹೋರಾಟ ಗಂಭೀರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಏಕಾಂಗಿ ಹೋರಾಟ ಕೈಬಿಟ್ಟು ಎಲ್ಲರು ಜಿಲ್ಲೆಯ ಜನರ ಹಿತಕ್ಕೆ ಒಟ್ಟಾಗಿ ಹೋರಾಡೋಣವೆಂದು ಮನವೊಲಿಸಿ ಕರೆತಂದರು.
ಮಠಾಧೀಶರೇನು ದೇಶದ್ರೋಹಿಗಳೇ?
ಇದಕ್ಕು ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊಗಡುಶಿವಣ್ಣ, ಮಠಾಧೀಶರೇನು ದೇಶದ್ರೋಹಿಗಳೆ? ದರೋಡೆಕೋರರೇ ಅಥವಾ ಸಮಾಜಘಾತುಕ ಶಕ್ತಿಗಳೇ. ಜಿಲ್ಲೆಯ ಜನರ ಹಿತಕ್ಕಾಗಿ ಹೋರಾಟಕ್ಕೆ ಇಳಿದಿದ್ದ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಯಾವುದೇ ಕಾರಣಕ್ಕು ಸಹಿಸುವುದಿಲ್ಲ ಎಂದು ಗುಡುಗಿದರು.
ನಮ್ಮ ನೀರು, ನಮ್ಮ ಹಕ್ಕನ್ನು ಚಲಾಯಿಸಿ, ಪ್ರತಿಭಟನೆ ಹೋರಾಟ ಮಾಡುವುದು ಕಾನೂನು ಬಾಹಿರವೇ? ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶವಿಲ್ಲವೇ? ಅವಕಾಶವಿಲ್ಲವೇ? ತಕ್ಷಣವೇ ಮಠಾಧೀಶರ ಮೇಲಿನ ಎಫ್ಐಆರ್ ಹಿಂಪಡೆಯಬೇಕು. ಪ್ರತಿಭಟನಾಕಾರರನ್ನು ಬೆದರಿಸಿ, ನೀರಿನ ಹಕ್ಕಿನ ಹೋರಾಟ ಹತ್ತಿಕ್ಕಲಾಗುತ್ತಿದೆ. ಇದು ಸಂವಿಧಾನ ವಿರೋಧಿ ಕೆಲಸ, ಮೊದಲು ಎಲ್ಲರ ಮೇಲಿನ ಎಫ್ಐಆರ್ ರದ್ದುಗೊಳಿಸಿ ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.