

ಲಿಂಗಸುಗೂರು: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಪಟ್ಟಣದ ವಿಜಯಮಹಾಂತೇಶ್ವರ ಶಾಖಾನುಭವ ಮಂಟಪದಲ್ಲಿ ಬಿಜೆಪಿ ಮಂಡಲ ಘಟಕದಿಂದ ಶಾಸಕ ಮಾನಪ್ಪ ವಜ್ಜಲ್ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಗುರುವಾರ ಮಾತನಾಡಿದರು. ತಾಪಂ, ಜಿಪಂ ಮತ್ತು ಲೋಕಸಭಾ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಮಾಹಿತಿಯನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸವ ಬಗ್ಗೆ ಗಮನ ಹರಿಸಿದ್ದು, ಭಾರತ್ ಮಾಲಾ, ವಿಮಾನ ನಿಲ್ದಾಣ ನಿರ್ಮಾಣ, ರೈಲ್ವೆ, ಜಲಧಾರೆ ಸೇರಿ ಅನೇಕ ಪ್ರಮುಖ ಯೋಜನೆಗಳು ಯುದ್ಧೋಪಾದಿಯಾಗಿ ನಡೆದಿವೆ. 900 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಭವನ ನಿರ್ಮಿಸಲಾಗಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ.
ಕೇಂದ್ರದ ಸಾಕಷ್ಟು ಅನುದಾನ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಆರೋಗ್ಯ, ಶಿಕ್ಷಣ, ನ್ಯಾಯ ಮಾತ್ರ ಉಚಿತವಾಗಿ ನೀಡಬೇಕೆಂಬುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕನಸಾಗಿತ್ತು.
ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳು ಪೊಳ್ಳು ಭರವಸೆಗಳಾಗಿದ್ದು, ಯಶಸ್ವಿಯಾಗಲು ಸಾಧ್ಯವಿಲ್ಲ. ಕ್ರಮೇಣ ರಾಜ್ಯದ ಜನರಿಗೆ ಸತ್ಯದ ಅರಿವಾಗಲಿದೆ ಎಂದು ಅಮರೇಶ್ವರ ನಾಯಕ ಹೇಳಿದರು.
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಚುನಾವಣೆಯಲ್ಲಿ ಭರವಸೆ ನೀಡಿದಂತೆ ನಿರಂತರ ಕುಡಿಯುವ ನೀರಿನ ವ್ಯವಸ್ಥೆ, ನೀರಾವರಿ ವಂಚಿತ ಪ್ರದೇಶಗಳಿಗೆ ನೀರುಣಿಸುವುದು, ಗುಡ್ಡಗಾಡು ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯ ನಿರ್ಮಾಣ, ಗಾರ್ಮೆಂಟ್ಸ್ ಕೈಗಾರಿಕೆ ಸ್ಥಾಪಿಸಿ ಎರಡು ಸಾವಿರ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.
ಪ್ರಮುಖರಾದ ಗುಂಡಪ್ಪ ಸಾಹುಕಾರ, ಮುದುಕಪ್ಪ ವಕೀಲ, ಹುಲ್ಲೇಶ ಸಾಹುಕಾರ, ಹನುಮಂತಪ್ಪ ಕಂದಗಲ್, ಜಗನ್ನಾಥ ಕುಲಕರ್ಣಿ, ಪರಮೇಶ ಯಾದವ್, ಗುಂಡಯ್ಯ ಸೊಪ್ಪಿಮಠ, ನಾರಾಯಣಪ್ಪ ನಾಯ್ಕ, ಜೀವಲೆಪ್ಪ ನಾಯ್ಕ, ಬೀರಪ್ಪ ಪೂಜಾರಿ, ರುದ್ರಗೌಡ ತುರಡಗಿ, ವೆಂಕನಗೌಡ ಪಾಟೀಲ್, ಜಯಶ್ರೀ ಸಕ್ರಿ, ಬಸಮ್ಮ ಯಾದವ್ ಇತರರು ಇದ್ದರು.