

ಲಿಂಗಸುಗೂರು: ವರುಣ ಅವಕೃಪೆಯಿಂದ ಒಣಗಲಾರಂಭಿಸಿದ್ದ ತಾಲೂಕಿನ ಮಳೆಯಾಶ್ರಿತ ಪ್ರದೇಶಗಳ ಬೆಳೆಗಳು ಸೋಮವಾರ ಸುರಿದ ಹುಬ್ಬ ಮಳೆಯಿಂದ ಮರು ಜೀವ ಪಡೆದಿವೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿದ್ದ ಅಲ್ಪ ಸ್ಪಲ್ಪ ಮಳೆಗೆ ಬಿತ್ತನೆಗೊಂಡಿದ್ದ ಬೆಳೆಗಳು ಆರಂಭದಲ್ಲಿ ಹುಲುಸಾಗಿ ಬೆಳೆದು ಹೂವಾಡುವ ವೇಳೆಗೆ ಮಳೆ ಕೈಕೊಟ್ಟಿತ್ತು. ಇದರಿಂದ ರೈತರು ಆಕಾಶದತ್ತ ಮುಖ ಮಾಡುವಂತಾಗಿತ್ತು. ಆಗಸ್ಟ್‌ನಲ್ಲೂ ಮಳೆ ಬಾರದಿದ್ದರಿಂದ ಬೆಳೆಗಳು ಒಣಗಲಾರಂಭಿಸಿದ್ದವು. ಹುಬ್ಬ ಮಳೆಯಿಂದ ಮುರುಜೀವ ಪಡೆದಿದ್ದು ಅಲ್ಪಮಟ್ಟಿಗೆ ಆದಾಯ ಬರುವ ಭರವಸೆ ರೈತರಲ್ಲಿ ಮೂಡಿದೆ. ಇನ್ನು ಬೋರ್‌ವೆಲ್, ತೆರೆದ ಬಾವಿ, ನೀರಾವರಿ ಇತರ ಜಲಮೂಲದಿಂದ ಬಿತ್ತನೆ ಮಾಡಿದ ಬೆಳೆಗಳು ಉತ್ತಮವಾಗಿವೆ.
ಇದನ್ನೂ ಓದಿ: ಬೆಳೆ ಒಣಗಿದ ಮೇಲೆ ಆರ್ಭಟಿಸಿದ ಹುಬ್ಬಿ ಮಳೆ
ಕೃಷಿ ಇಲಾಖೆ ಮಾಹಿತಿಯಂತೆ ಹೈಬ್ರಿಡ್ ಸಜ್ಜೆ 22,940 ಹೆಕ್ಟೇರ್ ಗುರಿಯಲ್ಲಿ 1208 ಹೆಕ್ಟೇರ್ (ಶೇ 58), ತೊಗರಿ 26,280 ಹೆಕ್ಟೇರ್ ಗುರಿಯ ಪೈಕಿ 16,577 ಹೆ. (ಶೇ 63), ಹತ್ತಿ 1250 ಹೆಕ್ಟೇರ್ ಗುರಿಯಲ್ಲಿ 2255 ಹೆ. (ಶೇ.89) ಬಿತ್ತನೆಯಾಗಿದ್ದು, ಭೂಮಿಯಿಂದ ಮೇಲೆದ್ದ ಬೆಳೆಗಳು ಮಳೆ ಕೊರತೆಯಿಂದ ಬಾಡುವ ಹಂತ ತಲುಪಿದ್ದವು. ಸದ್ಯ ತಾಲೂಕಿನಲ್ಲಿ ಮಲೆನಾಡು ವಾತಾವರಣ ನಿರ್ಮಾಣಗೊಂಡಿದ್ದು, ಬರ ಆವರಿಸಬಹುದೆಂಬ ರೈತರ ಆತಂಕ ಸದಸ್ಯಕ್ಕೆ ದೂರಾಗಿದೆ.
ತಾಲೂಕಿನಲ್ಲಿ ಬಿತ್ತನೆಗೊಂಡ ತೊಗರಿ, ಹತ್ತಿ, ಸೂರ್ಯಕಾಂತಿ, ಮೆಣಸಿನಕಾಯಿ, ಸಜ್ಜೆ ಬೆಳೆಗಳು ಹೂ ಬಿಡುವ ಹಂತದಲ್ಲಿದ್ದವು. ಸೆ.4 ರಂದು ಸುರಿದ ಮಳೆಯಿಂದ ರಸಗೊಬ್ಬರ ಒದಗಿಸಲು ಅನುಕೂಲವಾಗಲಿದೆ. ಬಿಸಿಲ ತಾಪಮಾನದಿಂದ ಕುಂಠಿತಗೊಂಡ ಬೆಳೆಯ ಬೆಳವಣಿಗೆಗೆ ಈ ಮಳೆ ಅನುಕೂಲವಾಗಿದ್ದು, ಹೂವು ಕಾಯಿ ಸಂಖ್ಯೆ ಹೆಚ್ಚಿಸಲಿದೆ. ರಸ ಹೀರುವ ಕೀಟಗಳಾದ (ಜಿಗಿ, ಥ್ರಿಪ್ಸ್ ನುಶಿ ಮತ್ತು ಬಿಳಿ ನೊಣ) ಹಾವಳಿ ಕಡಿಮೆಯಾಗುತ್ತದೆ. ಎಡೆ ಕುಂಟೆ ಹೊಡೆದು ಕಳೆ ನಿರ್ವಹಣೆಗೆ ಅನುಕೂಲವಾಗಲಿದೆ. ಮೆಣಸಿನಕಾಯಿ ಮತ್ತು ಭತ್ತದ ಸಸಿ ನಾಟಿಗೂ ಉಪಯೋಗವಾಗಲಿದೆ.
ಡಾ.ವಾಣಿಶ್ರೀ
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ, ಲಿಂಗಸುಗೂರು