More

    ಬೆಳೆ ಒಣಗಿದ ಮೇಲೆ ಆರ್ಭಟಿಸಿದ ಹುಬ್ಬಿ ಮಳೆ

    ಕುಕನೂರು: ಪ್ರಸ್ತುತ ಬಿತ್ತನೆ ಮಾಡಿದ್ದ ಬೆಳೆ ಮುಂಗಾರು ಮಳೆ ಕೊರತೆ ಹಿನ್ನಲೆಯಲ್ಲಿ ಸಂಪೂರ್ಣ ಒಣಗಿ ಹೋದ ಬಳಿಕ ಹುಬ್ಬಿ ಮಳೆ ಆರ್ಭಟ ಪ್ರಾರಂಭಗೊಂಡಿದೆ.

    ತಾಲೂಕಿನಾದ್ಯಂತ ಭಾನುವಾರ ಸಂಜೆಯಿಂದ ರಾತ್ರಿಯಿಡೀ ಮಳೆ ಸುರಿದಿದ್ದು, ಹಳ್ಳ, ಕೆರೆಗಳಿಗೆ ನೀರು ಹರಿದು ಬಂದಿದೆ. ಮುಂಗಾರು ಹಂಗಾಮಿನ ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜೆ, ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಸಂಪೂರ್ಣ ಒಣಗಿ ಹೋಗಿವೆ. ಸದ್ಯ ಹಿಂಗಾರು ಹಂಗಾಮಿನ ಮಳೆ ಆರಂಭಗೊಂಡಿದ್ದು, ಆ.31ರಂದು ಹುಬ್ಬಿ ಮಳೆ ಪ್ರಾರಂಭಗೊಂಡಿದೆ.

    ಈಗಾಗಲೇ ಕೆಲ ರೈತರು ಸರಿಯಾದ ಬೆಳೆ ಇಲ್ಲದ ಹಿನ್ನಲೆಯಲ್ಲಿ ಮೆಕ್ಕೆಜೋಳವನ್ನು ಕುರಿ, ಜಾನುವಾರುಗಳಿಗೆ ಮೇಯಿಸಲು ಸಂಪೂರ್ಣ ಜಮೀನು ಬಿಟ್ಟು ಕೊಟ್ಟಿದ್ದಾರೆ. ಅಲ್ಲದೆ ಕೆಲ ರೈತರು ಹರಗಿದ್ದಾರೆ. ಮಸಾರಿ (ಕೆಂಪು) ಮಣ್ಣು ಹೊಂದಿದ್ದ ರೈತರು ಈ ವರ್ಷ ಬರ ಎದುಸಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಬರ ಘೋಷಣೆಗೆ ಮೀನಾಮೇಷ ಮಾಡುತ್ತಿದ್ದು, ಮುಂಗಾರು ಬರ ಘೋಷಣೆ ಹಾಗೂ ಬೆಳೆ ವಿಮೆ ಬಂದರೆ ಬಿತ್ತನೆ ಮಾಡಿದ ವೆಚ್ಚ ರೈತರಿಗೆ ದೊರೆಯಲಿದೆ.

    ಸದ್ಯ ರೈತರು ಹಿಂಗಾರು ಹಂಗಾಮಿನ ನಿರೀಕ್ಷೆಯಲ್ಲಿದ್ದು, ಸೆ.13ರಂದು ಉತ್ತರ ಮಳೆ ಹಾಗೂ ಸೆ.27ರಂದು ಹಸ್ತ ಮಳೆ ಪ್ರಾರಂಭಗೊಳ್ಳುತ್ತದೆ. ಹಸ್ತ ಮಳೆ ನಂತರ ಹಿಂಗಾರು ಹಂಗಾಮಿನ ಬಿತ್ತನೆ ಆರಂಭಗೊಳ್ಳುತ್ತದೆ. ಎರ‌್ರಿ(ಕಪ್ಪು) ಮಣ್ಣು ಪ್ರದೇಶದ ಹಿಂಗಾರು ಬಿತ್ತನೆ ಹೆಚ್ಚಾಗುತ್ತಿದ್ದು, ಈ ಬಾರಿ ಕಡಲೆ ಬಿತ್ತನೆಗೆ ರೈತರು ಸಾಕಷ್ಟು ಉತ್ಸಾಹ ಹೊಂದಿದ್ದಾರೆ.

    ಈಗಾಗಲೇ ಮುಂಗಾರಿನಲ್ಲಿ ಕಪ್ಪು ಮಣ್ಣಿನಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ ಬಿತ್ತನೆ ಮಾಡಿದ್ದರೆ, ಕಡಲೆ ಬಿತ್ತನೆ ಪ್ರಮಾಣ ಕಡಿಮೆಯಾಗುತ್ತಿತ್ತು. ಆದರೆ, ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಿಲ್ಲ. ಬಿತ್ತನೆ ಮಾಡಿದ ಜಮೀನು ಕೂಡ ಸಂಪೂರ್ಣ ಹಾಳಾಗಿವೆ. ಇದರಿಂದ ಕಡಲೆ, ಜೋಳ, ಕುಸುಬಿ ಹೆಚ್ಚು ಬಿತ್ತನೆ ಮಾಡಲು ಮುಂದಾಗಿದ್ದಾರೆ. ಮುಂಗಾರಿನ ಹುಬ್ಬಿ ಮಳೆ ಪ್ರಾರಂಭಗೊಂಡಿದ್ದು, ಉತ್ತಮವಾಗಿ ಸುರಿಯಲಿ ಎಂಬುದು ರೈತರ ಆಶಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts