

ಲಿಂಗಸುಗೂರು: ಸನಾತನ ಪರಂಪರೆ ಹೊಂದಿದ ಭಾರತೀಯ ಧರ್ಮಾಚರಣೆಗಳು ವೈಜ್ಞಾನಿಕತೆಯಿಂದ ಕೂಡಿದ್ದು, ಇವುಗಳ ಪಾಲನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರ 18ನೇ ಪುಣ್ಯಸ್ಮರಣೆ ಮತ್ತು ಧರ್ಮ-ಧಾರ್ಮಿಕತೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಧರ್ಮ ಪರಮಾತ್ಮನಾದರೆ, ಧಾರ್ಮಿಕತೆ ಪ್ರಕೃತಿಯಾಗಿದೆ. ಧರ್ಮ ನೆಲೆಸಿರುವಲ್ಲಿ ಪ್ರಕೃತಿ ಸುಭಿಕ್ಷೆಯಿಂದ ಇರುತ್ತದೆ. ಅಧರ್ಮ ಹೆಚ್ಚಾದಾಗ ಧರ್ಮ ರಕ್ಷಣೆಗೆ ಪ್ರಕೃತಿಯೇ ನಾನಾ ವಿಕೋಪಗಳನ್ನು ತಂದೊಡ್ಡಿ ಸಮತೋಲನ ಕಾಯ್ದುಕೊಳ್ಳಲಿದೆ. ವಿಶ್ವಕ್ಕೆ ಮಾದರಿಯಾದ ಭಾರತದಲ್ಲಿ ಧರ್ಮಾಚರಣೆಗಳ ರಕ್ಷಣೆ ಅವಶ್ಯವಾಗಿದೆ ಎಂದರು.
ವೀರಶೈವ ಧರ್ಮದಲ್ಲಿ ಪ್ರಸ್ತುತ ದ್ವಂದ್ವ ನಿಲುವು ಕೇಳಿ ಬರುತ್ತಿದೆ. 12ನೇ ಶತಮಾನದಲ್ಲಿ ಬಸವಣ್ಣನವರ ಕಾಯಕ ಮತ್ತು ದಾಸೋಹ ಪರಿಕಲ್ಪನೆಯು ಶರಣರಿಗೆ ಕಾಯಕ, ದಾಸೋಹದ ಮಹತ್ವ ತಿಳಿಸಿದೆ. ಉಚಿತ ಊಟ ನೀಡುವುದರಿಂದ ಮನುಷ್ಯನಲ್ಲಿ ಸೋಮಾರಿತನ ಹೆಚ್ಚಾಗಿ ಕಾಯಕದ ಪರಿಕಲ್ಪನೆ ನಾಶವಾಗುತ್ತದೆ.
ಇದರಿಂದ ದೇಶ ಸುಭಿಕ್ಷತೆ ಕಳೆದುಕೊಂಡು ದುರ್ಭಿಕ್ಷತೆ ಹೆಚ್ಚಾಗಿ ಮುಂದೆ ಅಜಾಗರೂಕತೆ ತಾಂಡವಾಡಲಿದೆ. ಹೀಗಾಗಿ ಪ್ರತಿಯೊಬ್ಬರು ದುಡಿದುಣ್ಣುವ ಮತ್ತು ದಾಸೋಹ ತತ್ವ ರೂಢಿಸಿಕೊಳ್ಳಬೇಕು. ಮಠಾಧೀಶರು ಕೇವಲ ಉಪದೇಶ ನೀಡಲು ಸೀಮಿತರಾಗದೆ ತಮ್ಮಲ್ಲಿನ ಜ್ಞಾನವನ್ನು ಕೃತಿ ರೂಪದಲ್ಲಿ ಸಮಾಜಕ್ಕೆ ಅರ್ಪಿಸಬೇಕು ಎಂದು ತಿಳಿಸಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಧರ್ಮ ರಕ್ಷಣೆಗೆ ಉತ್ತಮ ಗ್ರಂಥಗಳು ಅತ್ಯಮೂಲವಾಗಿದ್ದು, ಸನಾತನ ಧರ್ಮ ಅರಿಯಲು ಲಿಖಿತ ಕೃತಿಗಳು ಜನರ ಬದುಕಿಗೆ ಮಾರ್ಗದರ್ಶನ ನೀಡಲಿವೆ. ಗ್ರಂಥಗಳ ಅಧ್ಯಯನದಿಂದ ಜ್ಞಾನಾರ್ಜನೆ ಹೆಚ್ಚಳವಾಗುತ್ತದೆ ಎಂದರು.
ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ಸದಾನಂದ ಶಿವಾಚಾರ್ಯರು, ವರರುದ್ರಮುನಿ ಶಿವಾಚಾರ್ಯರು, ಮುರುಘೇಂದ್ರ ಶಿವಯೋಗಿಗಳು, ವಾಮದೇವ ಶಿವಾಚಾರ್ಯರು, ಮಹಾಂತಲಿಂಗ ಶಿವಾಚಾರ್ಯರು, ಪ್ರಶಾಂತ ಸಾಗರ ಶಿವಾಚಾರ್ಯರು, ಶಿವಕುಮಾರ ಸ್ವಾಮೀಜಿ, ನಂದಿಕೇಶ್ವರಿ ಅಮ್ಮನವರು, ಸೋಮಶೇಖರ ಸ್ವಾಮೀಜಿ, ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಗಿರಿರಾಜ ಹೊಸಮನಿ, ಜಿ.ವಿ.ಕೆಂಚನಗುಡ್ಡ ಇತರರಿದ್ದರು.