ಲಿಂಗಸುಗೂರು ಪುರಸಭೆ ಸಿಒ ಅಮಾನತು

25LNG01
ರಡ್ಡಿ ರಾಯನಗೌಡ
Published on

ಲಿಂಗಸುಗೂರು: ಮಸ್ಕಿ ಪುರಸಭೆ ಸಿಒ ಆಗಿದ್ದ ವೇಳೆ ಪೀಠೋಪಕರಣ ಖರೀದಿಯಲ್ಲಿ ಹಣ ದುರ್ಬಳಕೆ ಮತ್ತು ಕರ್ತವ್ಯ ಲೋಪ ಆರೋಪದಡಿ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ ಅವರನ್ನು ಜಿಲ್ಲಾಧಿಕಾರಿ ಕೆ.ನಿತೀಶ್ ಸೋಮವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಸ್ಕಿ ಪುರಸಭೆಗೆ ಸಿಎಂ ಅಮೃತ ನಗರೋತ್ಥಾನ ಹಂತ-3ರ ಯೋಜನೆಯಡಿ ಹಂಚಿಕೆಯಾದ 57.64 ಲಕ್ಷ ರೂ. ದುರ್ಬಳಕೆಯಾಗಿರುವುದಾಗಿ ಕರವೇ ಅಧ್ಯಕ್ಷ ದುರುಗರಾಜ ವಟಗಲ್ ಎಂಬುವರು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ದೂರು ನೀಡಿದ್ದರು.

ಇದರನ್ವಯ ಜಿಲ್ಲಾ ನಗರಾಭಿವೃದ್ಧಿ ಕೋಶ ಎಇಇ ಎನ್.ಶ್ರೀದೇವಿ ತನಿಖೆ ಕೈಗೊಂಡು ಪರಿಶೀಲನಾ ವರದಿ ಸಲ್ಲಿಸಿದ್ದಾರೆ. ಮಸ್ಕಿಯಲ್ಲಿ ಪುರಸಭೆ ಕಾರ್ಯಾಲಯ ಹೊಸ ಕಟ್ಟಡ ಕಾಮಗಾರಿ ಅನುಷ್ಠಾನಗೊಳಿಸುವ ಬದಲು ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗದೆ ಇರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿರುವುದು ಕರ್ತವ್ಯ ಲೋಪವಾಗಿರುತ್ತದೆ.

ಇದರಿಂದ ಸರ್ಕಾರಕ್ಕೆ 57.64 ಲಕ್ಷ ರೂ. ಆರ್ಥಿಕ ನಷ್ಟ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಮಸ್ಕಿ ಪುರಸಭೆ ನೂತನ ಕಾರ್ಯಾಲಯಕ್ಕೆ ಪೀಠೋಪಕರಣಗಳನ್ನು ಅಳವಡಿಸುವ ಕಾಮಗಾರಿ ಭಾಗ-1ರ 30ಲಕ್ಷ ರೂ. ಮತ್ತು ಭಾಗ-2 ರ 27.64 ಲಕ್ಷ ರೂ. ಕ್ರಿಯಾ ಯೋಜನೆಯಲ್ಲಿ ಅನುಮೋದನೆ ಇರುವ ಕಾಮಗಾರಿಗಳನ್ನು ಪ್ರಸ್ತಾಪಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ನೇರವಾಗಿ ಕೆಆರ್‌ಐಡಿಎಲ್ ಸಂಸ್ಥೆಗೆ ಕಾಮಗಾರಿ ಅನುಷ್ಠಾನಗೊಳಿಸುವಂತೆ ಆದೇಶಿಸಿರುವುದು ಸರ್ಕಾರದ ಹಣ ದುರ್ಬಳಕೆ, ಬೇಜವಾಬ್ದಾರಿತನ, ಕರ್ತವ್ಯಲೋಪ ಮತ್ತು ಅಧಿಕಾರ ದುರ್ಬಳಕೆ ಆರೋಪದಡಿ ಸಾಕ್ಷಿಗಳ ರಕ್ಷಣೆ ಹಿನ್ನೆಲೆಯಲ್ಲಿ ಮಸ್ಕಿ ಪುರಸಭೆ ಹಿಂದಿನ ಮುಖ್ಯಾಧಿಕಾರಿ, ಪ್ರಸ್ತುತ ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ ಅವರನ್ನು ಜಿಲ್ಲಾಧಿಕಾರಿಗಳು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957 ರ ನಿಯಮ 10 (1) (ಡಿ) ರನ್ವಯ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net