

ಅಮರೇಶಸ್ವಾಮಿ ಬಲ್ಲಟಗಿ ಲಿಂಗಸುಗೂರು
ಕೃಷಿಯಲ್ಲಿ ಸಾವಯವ ಪದ್ಧತಿಯೊಂದಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂಬ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ನೆರವಾಗಿದೆ ರಾಜ್ಯ ಸರ್ಕಾರದ ಕೃಷಿ ಯಂತ್ರಧಾರೆ ಯೋಜನೆ. ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಾಧ್ಯವಾಗದ ರೈತಾಪಿ ವರ್ಗಕ್ಕೆ ಯಂತ್ರಧಾರೆ ಯೋಜನೆ ಅಮೃತಧಾರೆಯಾಗಿ ಪರಿಣಮಿಸಿದೆ.
ಈ ಆಧುನಿಕ ಕಾಲದಲ್ಲೂ ರೈತರು ಎತ್ತು, ಕೋಣ ಸೇರಿ ಜಾನುವಾರುಗಳ ಸಹಾಯದಿಂದ ಕೃಷಿ ಕಾಯಕದಲ್ಲಿ ತೊಡಗಿದ್ದರು. ಆದರೆ, ಉತ್ಪಾದನೆಗೆ ತಗಲುವ ವೆಚ್ಚ ಕಡಿಮೆ ಮಾಡಿ ಯಂತ್ರೋಪಕರಣಗಳ ಸಹಾಯದಿಂದ ಲಾಭದಾಯಕ ಕೃಷಿಯನ್ನಾಗಿ ರೂಪಿಸುವ ಉದ್ದೇಶದಿಂದ ಸರ್ಕಾರ 2014-15 ರಲ್ಲಿ ಕೃಷಿ ಯಂತ್ರಧಾರೆ ಯೋಜನೆ ಜಾರಿಗೆ ತಂದಿತು.
ಇದನ್ನೂ ಓದಿ: 71,246 ಹೆಕ್ಟೇರ್ನಲ್ಲಿ ಮುಂಗಾರು ಕೃಷಿ ಗುರಿ
ತಾಲೂಕಿನ ಹೊನ್ನಳ್ಳಿ, ಆನೆಹೊಸೂರು ಮತ್ತು ಮುದಗಲ್‌ನಲ್ಲಿ ಕೃಷಿ ಯಂತ್ರಧಾರೆ ಯೋಜನೆಯ ಸೇವಾ ಕೇಂದ್ರಗಳನ್ನು 2014 ರಲ್ಲಿ ತೆರೆಯಲಾಯಿತು. ತಾಲೂಕಿನಲ್ಲಿ ನೀರಾವರಿ 15,534 ಹಾಗೂ ಖುಷ್ಕಿ 45,597 ಹೆಕ್ಟೇರ್ ಸೇರಿ ಒಟ್ಟು 61,131 ಹೆಕ್ಟೇರ್ ಕೃಷಿ ಜಮೀನಿದೆ.
ನೀರಾವರಿ ಜಮೀನಿನಲ್ಲಿ ಭತ್ತ ಹಾಗೂ ಖುಷ್ಕಿ ಜಮೀನಿನಲ್ಲಿ ಹೈಬ್ರಿಡ್ ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ, ಹತ್ತಿ, ತೊಗರಿ, ಸೂರ್ಯಕಾಂತಿ, ಹೆಸರು, ಅಲಸಂದಿ ಸೇರಿ ಇತರ ಬೆಳೆಗಳು, ತೋಟಗಾರಿಕೆ, ತರಕಾರಿ ಬೆಳೆಯುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೃಷಿ ಯಂತ್ರಧಾರೆ ಯೋಜನೆಯ ಯಂತ್ರೋಪಕರಣಗಳು ಉಪಯುಕ್ತವಾಗಿವೆ.
ಹೊನ್ನಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಆನೆಹೊಸೂರು ಗ್ರಾಮದಲ್ಲಿ ವರ್ಷಾ ಅಗ್ರಿ ಬಿಸಿನೆಸ್ ಸೆಂಟರ್ ಡೆವೆಲಪ್‌ಮೆಂಟ್ ಸಂಸ್ಥೆಯ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಿಂದ ಹೊಕ್ಕಣೆ ಯಂತ್ರ, ಎಚ್‌ಟಿಪಿ ಸ್ಪ್ರೇಯರ್, ಬಿತ್ತನೆ ಕೂರಿಗೆ, ಹೊಂಡಾ ಸ್ಪ್ರೇಯರ್, ರೋಟೋವೇಟರ್, ಲೇವಲರ್ ಬ್ಲೇಡ್, ಪಡ್ಲರ್, ಡೀಸೆಲ್ ಪಂಪ್‌ಸೆಟ್, ಟಿಲ್ಲರ್, ಬ್ರಷ್ ಕಟ್ಟರ್, ಟ್ರಾಲಿ, ಹ್ಯಾಂಡ್ ಸ್ಪ್ರೇಯರ್, ದೊಡ್ಡ ಕುಂಟಿ, ಪಟ್ಟಿಕುಂಟಿ ಹಾಗೂ 5 ಟ್ರಾೃಕ್ಟರ್‌ಗಳನ್ನು ಬಾಡಿಗೆ ರೂಪದಲ್ಲಿ ರೈತರಿಗೆ ನೀಡಲಾಗುತ್ತಿದೆ.
ಹೊನ್ನಳ್ಳಿ, ಆನೆಹೊಸೂರು, ಮುದಗಲ್ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ರೈತರು ಕೃಷಿ ಯಂತ್ರಧಾರೆ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಹೊನ್ನಳ್ಳಿ ಗ್ರಾಮದಲ್ಲಿ ರಂಟೆ, ಕುಂಟೆ, ಔಷಧ ಸಿಂಪಡಣೆ ಸೇರಿ ಇತರ ಯಂತ್ರೋಪಕರಣಗಳಿಗೆ ದರ ನಿಗದಿ ಪಡಿಸಿರುವ ನಾಮಫಲಕ ಹಾಕಲಾಗಿದೆ.
ಆದರೆ, ಆನೆಹೊಸೂರು ಗ್ರಾಮದ ಕೇಂದ್ರದಲ್ಲಿ ಸಲಕರಣೆಗಳ ಬಾಡಿಗೆ ದರ ಪ್ರದರ್ಶನ ಮಾಡದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಮಳೆಗಾಲದಲ್ಲಿ ಉಳುಮೆ ಮತ್ತು ಬೇಸಿಗೆಯಲ್ಲಿ ಭೂಮಿ ಹದ ಮಾಡಲು ಯಂತ್ರೋಪಕರಣಗಳು ಬಾಡಿಗೆ ಪಡೆಯಲು ರೈತರು ಕೇಂದ್ರದತ್ತ ಧಾವಿಸುವುದರಿಂದ ಕೆಲವೆಡೆ ಬೇಡಿಕೆ ಅನುಸಾರ ಸಲಕರಣೆಗಳು ಸಿಗುತ್ತಿಲ್ಲವೆಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಸಕ್ತ ಮುಂಗಾರು ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ. ಜಮೀನಿನಲ್ಲಿ ಕಸ, ಕಡ್ಡಿ ಆಯ್ದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಕೆಲವೆಡೆ ರಂಟೆ-ಕುಂಟೆ ಹೊಡೆದು ಭೂಮಿ ಹದಗೊಳಿಸಿ ಗೊಬ್ಬರ ಎರಚಿ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಮೂರು ಕೇಂದ್ರಗಳನ್ನು ಹೊರತುಪಡಿಸಿ ಉಳಿದೆಡೆ ಹೆಚ್ಚುವರಿಯಾಗಿ ಕೇಂದ್ರಗಳನ್ನು ತೆರೆಯದ ಕಾರಣ ದೂರದ ಹಳ್ಳಿಗಳ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ.
ಇದರಿಂದಾಗಿ ಖಾಸಗಿ ಯಂತ್ರೋಪಕರಣಗಳ ಮೊರೆ ಹೋಗುವಂತಾಗಿದೆ. ಹೆಚ್ಚುವರಿಯಾಗಿ ನಾಗರಹಾಳ, ಮಾವಿನಭಾವಿ, ಗುರುಗುಂಟಾ, ರೋಡಲಬಂಡಾ, ಗೊರೇಬಾಳ ಸೇರಿ ಇತರೆಡೆ ಕೇಂದ್ರಗಳನ್ನು ತೆರೆದರೆ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗಲಿದೆ.
ಸರ್ಕಾರದ ಕೃಷಿ ಯಂತ್ರಧಾರೆ ಯೋಜನೆ ಜಾರಿಯಿಂದ ಸಣ್ಣ ಮತ್ತು ಮಧ್ಯಮ ರೈತರಿಗೆ ತುಂಬಾ ಉಪಯೋಗವಾಗಿದೆ. ಹೊನ್ನಳ್ಳಿ ಸೇರಿ ಸುತ್ತಮುತ್ತಲ ಹಳ್ಳಿಗಳ ರೈತರು ಕೇಂದ್ರದಿಂದ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಪಡೆದು ಕೃಷಿ ಚಟುವಟಿಕೆಗೆ ಬಳಸುತ್ತಿದ್ದಾರೆ.| ಶಿವಪ್ಪ, ರೈತ, ಹೊಕ್ರಾಣಿ ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಪಡೆಯುತ್ತಿದ್ದೇವೆ.| ಹನುಮಂತ, ರೈತ, ಹೊನ್ನಳ್ಳಿ ಆನೆಹೊಸೂರು ಕೇಂದ್ರದಲ್ಲಿ ಕೃಷಿ ಯಂತ್ರೋಪಕರಣಗಳಿಗೆ ಖಾಸಗಿ ಸಲಕರಣೆಗಳಷ್ಟೇ ಬಾಡಿಗೆ ಪಡೆಯಲಾಗುತ್ತಿದೆ. ಬಾಡಿಗೆ ದರ ಕೂಡ ಹಾಕಿಲ್ಲ. ತಾಲೂಕಿನಲ್ಲಿ ಹೆಚ್ಚುವರಿಯಾಗಿ ಕೇಂದ್ರಗಳನ್ನು ಸ್ಥಾಪಿಸಿದರೆ ರೈತರಿಗೆ ಸರಳವಾಗಿ ಯಂತ್ರೋಪಕರಣಗಳು ಪಡೆಯಲು ಅನುಕೂಲವಾಗಲಿದೆ.| ಶಿವಪುತ್ರಗೌಡ, ರೈತ, ಜಾಗೀರನಂದಿಹಾಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರದಲ್ಲಿ ಕೃಷಿ ಯಂತ್ರಧಾರೆಯಡಿ ರೈತರಿಗೆ ಬೇಕಾದ ಗುಣಮಟ್ಟದ ಯಂತ್ರೋಪಕರಣಗಳು ಬಾಡಿಗೆಗೆ ಲಭ್ಯ ಇವೆ. 5 ಟ್ರಾೃಕ್ಟರ್‌ಗೆ 3 ಜನ ಚಾಲಕರಿದ್ದಾರೆ. ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರ ನಿಗದಿಪಡಿಸಿದಂತೆ ತಾಸು ಮತ್ತು ದಿನದ ರೂಪದಲ್ಲಿ ಬಾಡಿಗೆ ಪಡೆಯಲಾಗುತ್ತದೆ. ರೈತರಿಗೆ ಯಾವುದೇ ಮೋಸ ಅಥವಾ ಆರ್ಥಿಕ ಹೊರೆಯಾಗದಂತೆ ಕಾಳಜಿ ವಹಿಸಲಾಗುತ್ತಿದೆ.| ಆನಂದ, ವ್ಯವಸ್ಥಾಪಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಕೇಂದ್ರ, ಹೊನ್ನಳ್ಳಿ