ಸಿನಿಮಾ

71,246 ಹೆಕ್ಟೇರ್‌ನಲ್ಲಿ ಮುಂಗಾರು ಕೃಷಿ ಗುರಿ

*ಜುಲೈ, ಆಗಸ್ಟ್‌ನಲ್ಲಿ ಬಹುಪಾಲು ಬಿತ್ತನೆ

*8138 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭಗೊಳ್ಳುತ್ತಿದ್ದು, ಕೃಷಿ ಇಲಾಖೆ 71,246 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುವ ಗುರಿಯೊಂದಿಗೆ ಸಿದ್ಧತೆ ನಡೆಸಿದೆ.
ಮುಖ್ಯವಾಗಿ ಈ ಬಾರಿ ರಾಗಿಗೆ ಪ್ರಾಧಾನ್ಯತೆ ನೀಡಲಾಗಿದೆ. 59,100 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ನಿರೀಕ್ಷೆ ಇದ್ದು, ನಂತರದಲ್ಲಿ 8,136 ಹೆಕ್ಟೇರ್ ಮುಸುಕಿನ ಜೋಳ, 948 ಹೆಕ್ಟೇರ್ ತೊಗರಿ ಹಾಗೂ 215 ಹೆಕ್ಟೇರ್ ನೆಲಗಡಲೆ ಬಿತ್ತನೆಯ ಗುರಿ ಹೊಂದಲಾಗಿದೆ. ಜುಲೈ ಹಾಗೂ ಆಗಸ್ಟ್‌ನಲ್ಲಿ ಬಹುಪಾಲು ಬಿತ್ತನೆ ಆಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

8,138 ಮೆಟ್ರಿಕ್ ರಸಗೊಬ್ಬರ ದಾಸ್ತಾನು: ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿ ಈ ಬಾರಿ 29,451 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದೆ ಎಂದು ಅಂದಾಜಿಲಾಗಿದೆ. ಮೇ ಅಂತ್ಯದಲ್ಲಿ 4,715 ಮೆಟ್ರಿಕ್ ಟನ್ ಬೇಡಿಕೆ ಇದ್ದು, ಪ್ರಸ್ತುತ 8,138 ಮೆಟ್ರಿಕ್ ಟನ್ ದಾಸ್ತಾನು ಇದೆ. ಆದ್ದರಿಂದ ಜಿಲ್ಲೆಯ ಎಲ್ಲಿಯೂ ರಸಗೊಬ್ಬರ ಕೊರತೆ ಕಂಡುಬರುವುದಿಲ್ಲ ಎಂದು ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆ ಸಿದ್ಧತೆ: ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಇಲಾಖೆ ಸಿದ್ಧತೆ ನಡೆಸಿದೆ. ಕಳೆದ ಬಾರಿ ಅಕಾಲಿಕ ಮಳೆಯಿಂದಾಗಿ ರಾಗಿ ಕೊಯ್ಲಿನ ಸಮಯದಲ್ಲಿ ಸಾಕಷ್ಟು ರೈತರು ಆರ್ಥಿಕ ಸಂಕಷ್ಟ ಎದುರಿಸಿದ್ದರು. ರೈತರಿಗೆ ಬೆಳೆ ವಿಮೆ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಲು ಕೃಷಿ ಇಲಾಖೆ ಮುಂದಾಗಿತ್ತು. ಕರಪತ್ರಗಳ ಮೂಲಕ ಪ್ರತಿ ಹಳ್ಳಿಗಳಲ್ಲಿ ಪ್ರಚಾರ ನಡೆಸಿತ್ತು. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಆರಂಭಗೊಂಡಿದ್ದು ನಾಲ್ಕೂ ತಾಲೂಕುಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದ ಮೂರು ವರ್ಷದಿಂದಲೂ ರಾಗಿ ಬೆಳೆಯಲ್ಲಿ ದಾಖಲೆ ಮಟ್ಟದ ಸಲು ಪಡೆಯುತ್ತಿರುವ ಜಿಲ್ಲೆಯಲ್ಲಿ ಈ ಬಾರಿ ಮತ್ತಷ್ಟು ಸಲು ಪಡೆಯುವ ನಿರೀಕ್ಷೆ ಇದೆ ಎಂದು ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ತೆರವುಗೊಂಡಿದ್ದು, ಅದೇ ಜಮೀನಿನಲ್ಲಿ ರಾಗಿ, ಜೋಳ ಸೇರಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದ್ದು, ಇಳವರಿ ಹೆಚ್ಚಲು ಕಾರಣವಾಗಿದೆ.

ಜೋಳ ಬೆಳೆಗೆ ಒಲವು: ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಜೋಳ ಬೆಳೆಯಲು ರೈತರು ಉತ್ಸುಕರಾಗಿದ್ದಾರೆ, ರಾಗಿ ಬೆಳೆಗೆ ಹೋಲಿಸಿದರೆ ಜೋಳಕ್ಕೆ ಹೆಚ್ಚಿದ ದರವಿದ್ದು, ಆರ್ಥಿಕ ಲಾಭದ ದೃಷ್ಟಿಯಿಂದ ಹಲವು ರೈತರು ರಾಗಿಗೆ ಪರ್ಯಾಯವಾಗಿ ಜೋಳ ಬೆಳೆಯಲು ಮುಂದಾಗಿದ್ದಾರೆ ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯೂ ಜೋಳ ಬೆಳೆಯುವ ರೈತರಿಗೆ ಉಪಯುಕ್ತ ಮಾಹಿತಿ ಜತೆಗೆ ಇಲಾಖೆ ಸೌಲಭ್ಯ ಒದಗಿಸಲು ಆಸಕ್ತಿ ತೋರಿಸುತ್ತಿದೆ.


ಮುಂಗಾರು ಹಂಗಾವು ಗುರಿಯಾಗಿಟ್ಟುಕೊಂಡು ಈ ಬಾರಿ 71,246 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗುರಿ ಹೊಂದಲಾಗಿದೆ. ಈ ಬಾರಿ 29,451 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಬಗ್ಗೆ ಅಂದಾಜಿಲಾಗಿದೆ. ಮೇ ಅಂತ್ಯದಲ್ಲಿ 4,715 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, ಪ್ರಸ್ತುತ 8,138 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ.
ವಿನೂತ, ಕೃಷಿ ಉಪನಿರ್ದೇಶಕಿ ಬೆಂ.ಗ್ರಾಮಾಂತರ

Latest Posts

ಲೈಫ್‌ಸ್ಟೈಲ್