ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು

Published on

ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.


ಗ್ರಾಮದ ಮರೀಗೌಡ ಅವರ ಪತ್ನಿ ದ್ಯಾವಮ್ಮ (60), ಕೃಷ್ಣಶೆಟ್ಟಿ ಅವರ ಪತ್ನಿ ಪುಟ್ಟಮ್ಮ (60) ಮೃತರು. ಮಾಳಗೌಡ ಅವರ ಪುತ್ರ ಮರೀಗೌಡ (80), ಮಂಜಶೆಟ್ಟಿ ಅವರ ಪತ್ನಿ ಉಷಾ (40), ರಾಮೇಗೌಡ ಅವರ ಪತ್ನಿ ಸರೋಜಾ (50)ಗಂಭೀರ ಗಾಯಗೊಂಡಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಮಧ್ಯಾಹ್ನ ಜಮೀನಿನಲ್ಲಿ ಜೋಳದ ಬಿತ್ತನೆ ಮಾಡುತ್ತಿದ್ದರು. ಮಳೆ ಬಂದ ಕಾರಣ ರಕ್ಷಣೆಗಾಗಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ದ್ಯಾವಮ್ಮ, ಪುಟ್ಟಮ್ಮ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಮೂವರು ಗಾಯಗೊಂಡರು. ಸಮೀಪದಲ್ಲಿದ್ದ ಸ್ಥಳೀಯರು ಆಂಬುಲೆನ್ಸ್‌ನಲ್ಲಿ ಮೂವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು.


ಶಾಸಕ ಎ. ಮಂಜು ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ಮೃತ ಕುಟುಂಬಗಳಿಗೆ ಸರ್ಕಾರದಿಂದ ದೊರೆಯಬೇಕಾದ ಸವಲತ್ತನ್ನು ದೊರಕಿಸಲು ತುರ್ತು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಸೂಚಿಸಿರುವುದಾಗಿ ಹೇಳಿದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ, ಶಿರಸ್ತೇದಾರ್ ಸಿ.ಸ್ವಾಮಿ, ಕಂದಾಯ ನಿರೀಕ್ಷಕ ರಾಘವೇಂದ್ರ ಇದ್ದರು. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net