

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕಾಂಡ್ಲಾವನ ನಶಿಸಿರುವುದರಿಂದ ಸಮುದ್ರದಲ್ಲಿ ಬೆಳೆಯುವ ಜಲಚರಗಳು ಸಂಕಷ್ಟ ಅನುಭವಿಸುತ್ತಿವೆ. ಉಳ್ಳಾಲದ ಕಡಲ್ಕೊರೆತ ತಡೆಗೆ ಕಾಂಡ್ಲಾವನ ಬೆಳೆಸುವುದೇ ಪರಿಹಾರ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ನಿವೃತ್ತ ವೈಜ್ಞಾನಿಕ ಅಧಿಕಾರಿ ಡಾ.ದೊಡ್ಡ ಅಶ್ವಥ್ ನಾರಾಯಣಸ್ವಾಮಿ ಬೆಂಗಳೂರು ಹೇಳಿದರು.
ತೊಕ್ಕೊಟ್ಟು ಪತ್ರಕರ್ತರ ಸಂಘದ ಕಚೇರಿಯಲ್ಲಿ ಶನಿವಾರ ತಿಂಗಳ ಬೆಳಕು-ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು. 1993ರಲ್ಲಿ ಸಿಆರ್‌ಜಡ್ ನಕ್ಷೆ ತಯಾರಿಸುವ ಸಂದರ್ಭ ಉಳ್ಳಾಲದಿಂದ ತಲಪಾಡಿವರೆಗೂ ಕಾಂಡ್ಲಾ ವನ ಇತ್ತು. ಅದನ್ನು ಕಡಿದ ಪರಿಣಾಮ ಕಡಲ್ಕೊರೆತ ವ್ಯಾಪಕವಾಗಿ ಜನವಸತಿ ಪ್ರದೇಶಗಳನ್ನು ನುಂಗಿದೆ. ಶ್ರೀಲಂಕಾ, ಸಿಂಗಾಪುರ, ವಿಯೆಟ್ನಾಂ ಸೇರಿದಂತೆ ಕೇರಳದಲ್ಲಿಯೂ ಕಾಂಡ್ಲವನ ವ್ಯಾಪಕವಾಗಿ ಬೆಳೆಸಲು ಸರ್ಕಾರಗಳು ಪ್ರೋತ್ಸಾಹಿಸುತ್ತಿವೆ. ಆದರೆ ದ.ಕ.ದಲ್ಲಿ ಕಾಂಡ್ಲ ಗಿಡಗಳು ಸಂಪೂರ್ಣ ನಶಿಸಿ ಹೋಗಿವೆ. ಪರಿಸರ ವಿಚಾರಗಳನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅರ್ಥೈಸಿದ್ದರು. 1981ರಲ್ಲಿ ನಶಿಸುವ ಹಂತದಲ್ಲಿದ್ದ ಒಂದು ಕಾಲಿನ ಏಡಿಗಳ ಸಂತತಿಯನ್ನು ಬೆಳೆಸುವುದು ಹಾಗೂ ಉಳಿಸುವ ಕಲ್ಪನೆಯನ್ನು ಹೊಂದಿದ್ದರು. ಕಡಲತೀರ ಸಂರಕ್ಷಣೆ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿ ಕಡಲತೀರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಂರಕ್ಷಣಾ ಕ್ರಮಗಳಿಗೆ ಒತ್ತಾಯಿಸಿದ ಪತ್ರ ಕಳುಹಿಸಿರುವ ಸಾಕ್ಷಿಯಿದೆ ಎಂದು ತಿಳಿಸಿದರು.
ಮೆಸ್ಕಾಂ ಕಿರಿಯ ಅಭಿಯಂತ ನಿತೇಶ್ ಹೊಸಗದ್ದೆ ಉದ್ಘಾಟಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ, ಗ್ಯಾನ್ ವೇದಾಂತ್ ಫೌಂಡೇಷನ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸೂರಿಂಜೆ, ಸಂಘದ ಉಪಾಧ್ಯಕ್ಷರಾದ ದಿನೇಶ್ ನಾಯಕ್, ಆರೀಫ್ ಕಲ್ಕಟ್ಟ, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಕಾರ್ಯದರ್ಶಿ ವಜ್ರ ಗುಜರನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಶಂಕರ್, ಆಸೀಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರ್, ಜಿಲ್ಲಾ ಸಮಿತಿ ಸದಸ್ಯ ಮೋಹನ್ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು. ಡಾ.ಸತೀಶ್ ಕೊಣಾಜೆ ವಂದಿಸಿದರು. ಶಶಿಧರ್ ಪೊಯ್ಯತ್ತಬೈಲ್ ನಿರೂಪಿಸಿದರು.
ದೇಶದುದ್ದಕ್ಕೂ ಪರಿಸರ ವ್ಯವಸ್ಥಾಪನಾ ಯೋಜನೆ ತಯಾರಿಸಬೇಕೆನ್ನುವ ಕೇಂದ್ರ ಸರ್ಕಾರದ ಅಧಿಸೂಚನೆ ಪಾಲಿಸದ ಸಂದರ್ಭ 1991ರಲ್ಲಿ ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿ, ರಾಜ್ಯಗಳಿಗೆ ನಿರ್ದೇಶಿಸುವಂತೆ ಆದೇಶಿಸಿತ್ತು. ಈ ಆದೇಶದಂತೆ 1993ರಲ್ಲಿ ಮುಖ್ಯಮಂತ್ರಿ ವೀರಪ್ಪ ಮೊಲಿಯವರು ದಕ್ಷಿಣ ಕನ್ನಡ, ಉಡುಪಿ, ಕಾರವಾರ ಸಮುದ್ರತೀರದಲ್ಲಿ 21 ಮಧ್ಯಸ್ಥಿಕೆಗಳ ಅನುಷ್ಠಾನಕ್ಕೆ ಮುಂದಾದರು. ಅದಕ್ಕಾಗಿ ಡೆನ್ಮಾರ್ಕ್ ಸರ್ಕಾರದಿಂದ ಧನಸಹಾಯಕ್ಕೆ ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ 2 ವರ್ಷಗಳ ಕಾಲ ರಾಜ್ಯದ ಸಮುದ್ರತೀರದ ಪ್ರದೇಶಗಳಲ್ಲಿ ಅಧ್ಯಯನಕ್ಕೆ ಸರ್ಕಾರ ನಿಯೋಗ ರಚಿಸಿತ್ತು. ನಿಯೋಗವು ನಕ್ಷೆ ತಯಾರಿಸುವ ಸಂದರ್ಭ ಉಳ್ಳಾಲದಿಂದ ತಲಪಾಡಿವರೆಗೂ ಕಾಂಡ್ಲವನ ತುಂಬಿತ್ತು ಎಂಬುದನ್ನು ಉಲ್ಲೇಖಿಸಿದೆ ಎಂದು ಡಾ.ದೊಡ್ಡ ಅಶ್ವಥ್ ನಾರಾಯಣಸ್ವಾಮಿ ಬೆಂಗಳೂರು ಮಾಹಿತಿ ನೀಡಿದರು.