

ನುಗ್ಗೇಹಳ್ಳಿ: ತಾಲೂಕಿನ ರೈತರನ್ನು ಉಳಿಸುವ ಸಲುವಾಗಿ ಸುಮಾರು 40ಕ್ಕೂ ಹೆಚ್ಚು ಕೆರೆ-ಕಟ್ಟೆಗಳನ್ನು ಏತ ನೀರಾವರಿ ಯೋಜನೆಗಳ ಮೂಲಕ ಪೈಪ್‌ಲೈನ್ ಅಳವಡಿಸಿ ಕೆರೆಗಳನ್ನು ತುಂಬಿಸುವ ಸಲುವಾಗಿ ವೈಯಕ್ತಿಕವಾಗಿ ಹಣ ನೀಡಿ ಚಾಲನೆ ನೀಡಿದ್ದೇನೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಕಲ್ಕೆರೆ ಕೆರೆಯಿಂದ ಅಯ್ಯರಹಳ್ಳಿ ಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸುವ ಯೋಜನೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ನಾನು ಈ ಹಿಂದೆ ಕೊಟ್ಟ ಮಾತಿನಂತೆ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕಲ್ಕೆರೆ ದೇವಿಗೆರೆ ಕೆ.ಚೌಡೇನಹಳ್ಳಿ ಕೆರೆಗಳನ್ನು ತುಂಬಿಸಲಾಗಿದೆ. ಕಲ್ಕೆರೆ ಕೆರೆಯಿಂದ ಅಯ್ಯರಹಳ್ಳಿ ಕೆರೆಗೆ ಪೈಪ್‌ಲೈನ್ ಮೂಲಕ ಮೋಟಾರ್ ಅಳವಡಿಸಿ ನೀರು ತುಂಬಿಸುವ ಸಲುವಾಗಿ ಸುಮಾರು 12 ಲಕ್ಷ ರೂ. ಖರ್ಚು ಮಾಡಿ ಯೋಜನೆಯನ್ನು ರೂಪಿಸಲಾಗಿದೆ. ಇಂದು ಅಧಿಕೃತವಾಗಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ತಾಲೂಕಿನಲ್ಲಿ ರೈತರನ್ನು ಉಳಿಸುವ ಸಲುವಾಗಿ ವೈಯಕ್ತಿಕವಾಗಿ ಈಗಾಗಲೇ 40ಕ್ಕೂ ಹೆಚ್ಚು ಕೆರೆ-ಕಟ್ಟೆಗಳನ್ನು ತುಂಬಿಸಲು ಪೈಪ್‌ಲೈನ್ ಅಳವಡಿಸಿ ಯೋಜನೆ ರೂಪಿಸಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ವಿರೋಧ ಪಕ್ಷಗಳ ನಾಯಕರ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಬೇಕಾಗಿರುವುದು ತಾಲೂಕಿನ ರೈತರ ಹಿತ ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ನನ್ನ ಮೂರು ಅವಧಿಯಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿದ್ದೇನೆ. ಕೆಲವರ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಸಂಪೂರ್ಣವಾಗಿ ಯಶಸ್ವಿಗೊಂಡಿದ್ದು, ಕಳೆದ 6 ವರ್ಷಗಳಿಂದ ಈ ಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಈಗ ಸದ್ಯ ಜಂಬೂರ ಕೆರೆಗೆ ನೀರು ಹರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನುಗ್ಗೇಹಳ್ಳಿ ಕೆರೆ ಸಂಪೂರ್ಣವಾಗಿ ಭರ್ತಿಗೊಂಡ ಮೇಲೆ ಚನ್ನನಕಟ್ಟೆ ಕೆರೆ, ತಾವರೆ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ತಾಲೂಕಿನಲ್ಲಿ ಈಗಾಗಲೇ ಶೇ.85ರಷ್ಟು ನೀರಾವರಿ ಯೋಜನೆಗಳು ಪೂರ್ಣಗೊಂಡು ಯಶಸ್ವಿಯಾಗಿವೆ ಎಂದರು.
ಉದ್ಯಮಿ ಅಣತಿ ಯೋಗೀಶ್, ವಿ.ಎನ್.ಮಂಜುನಾಥ್, ಕಲ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಸು, ಕೃಷಿ ಪತ್ತಿನ ಅಧ್ಯಕ್ಷ ಅಶೋಕ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಹರೀಶ್, ವಕೀಲ ಡಿ.ಬಿ.ಬಸವರಾಜ್, ಉಪನ್ಯಾಸಕ ಯೋಗೀಶ್, ಗುತ್ತಿಗೆದಾರ ಕಿರಣ್, ಕೃಷಿ ಪತ್ತಿನ ನಿರ್ದೇಶಕ ರಮೇಶ್, ಮುಖಂಡರಾದ ಕುಮಾರಸ್ವಾಮಿ, ಹನುಮೇಗೌಡ, ಮರಿಲಿಂಗೇಗೌಡ, ಕೃಷ್ಣೇಗೌಡ ಡಿ.ಸಿ. ತಿಮ್ಮಮ್ಮ, ದೇವಗೆರೆ ಶಿವಣ್ಣ, ಹುಲಿಕೆರೆ ಸಂಪತ್‌ಕುಮಾರ್, ಹುಲ್ಲೇನಹಳ್ಳಿ ನಾರಾಯಣ್ ಸೇರಿದಂತೆ ಇತರರು ಹಾಜರಿದ್ದರು.