ಮಾಜಿ ಶಾಸಕ ಸಂಪಂಗಿಗೆ ಕೊಲೆ ಬೆದರಿಕೆ; ಇನ್ನೊಬ್ಬ ಮಾಜಿ ಶಾಸಕರ ಬೆಂಬಲಿಗರ ವಿರುದ್ಧ ಆರೋಪ..

Sampangi Y
Published on

ಕೋಲಾರ: ಮಾಜಿ ಶಾಸಕ ವೈ. ಸಂಪಂಗಿ ಅವರಿಗೆ ಕೊಲೆ ಬೆದರಿಕೆಯೊಡ್ಡಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೊಬ್ಬ ಮಾಜಿ ಶಾಸಕರ ಬೆಂಬಲಿಗರ ವಿರುದ್ಧ ಆರೋಪ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರನ್ನು ಕೂಡ ನೀಡಲಾಗಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ವೈ, ಸಂಪಂಗಿ, ತಮಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಕೆಜಿಎಫ್​ ಎಸ್​ಪಿ ಧರಣಿದೇವಿ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ಎಸ್. ರಾಜೇಂದ್ರನ್ ಅವರ ಬೆಂಬಲಿಗರಿಂದ ಕೊಲೆ ಬೆದರಿಕೆ ಬಂದಿದ್ದಾಗಿ ಅವರು ತಿಳಿಸಿದ್ದಾರೆ.

ಈ ಇಬ್ಬರೂ ಮಾಜಿ ಶಾಸಕರು ಇತ್ತೀಚೆಗೆ ಅಂಬೇಡ್ಕರ್ ಭವನ ನಿರ್ಮಾಣ ವಿಚಾರವಾಗಿ ಪರ-ವಿರೋಧ ಹೇಳಿಕೆಗಳನ್ನು ನೀಡಿದ್ದರು. ಬಿಜೆಪಿ ಸಂಘಟನೆ, ಆರ್​ಎಸ್​ಎಸ್​​, ವಿಶ್ವ ಹಿಂದು ಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿ ಹಾಗೂ ಗೋಹತ್ಯೆ ನಿಷೇಧ ಪ್ರಚಾರ ಮಾಡಿದ್ದಕ್ಕೆ ಪ್ರಾಣ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಾಜಿ ಶಾಸಕ ಎಸ್. ರಾಜೇಂದ್ರನ್ ಅವರ 8 ಬೆಂಬಲಿಗರ ವಿರುದ್ಧ ಎಸ್​​ಪಿ ಅವರಿಗೆ ದಾಖಲೆ ಸಹಿತ ದೂರು ನೀಡಿದ ಸಂಪಂಗಿ, ನನಗೆ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net