

ಗೌರಿಬಿದನೂರು: ವಿದ್ಯಾರ್ಥಿ ಜೀವನದಲ್ಲಿ ಓದಿನ ಕಡೆ ಗಮನಹರಿಸದೆ ಕಾಲಹರಣ ಮಾಡಿದರೆ ಭವಿಷ್ಯ ಹಾಳಾಗಲಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಎಸ್‌ಎಸ್‌ಇಎ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಳೆದ ಬಾರಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಯಲ್ಲಿ ಕೊನೇ ಸ್ಥಾನದಲ್ಲಿತ್ತು. ಈ ಬಾರಿ ಆ ರೀತಿ ಆಗಬಾರದು. ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆಯಬೇಕು. ಇದಕ್ಕೆ ವಿದ್ಯಾರ್ಥಿಗಳ ಶಿಕ್ಷಕರ ಶ್ರಮ ಮುಖ್ಯ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ವಿದ್ಯೆಯೆಂಬುದು ಸಂಪತ್ತು. ಉತ್ತಮ ಶಿಕ್ಷಣ ಪಡೆದರೆ ಜ್ಞಾನದ ಮಟ್ಟ ಹೆಚ್ಚುತ್ತದೆ. ನಮ್ಮನ್ನು ಯಾರೂ ದಾರಿ ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ಯಾರೂ ಕಾಲಹರಣ ಮಾಡಬೇಡಿ ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದಂತೆ ನಾವು ಮೊದಲು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಬಳಿಕ ಕನಸುಗಳನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಛಲ ಬಿಡದೆ ಸಾಗಬೇಕು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಜೀವನದ ಪ್ರಮುಖ ಮೆಟ್ಟಿಲುಗಳು. ಹೆಚ್ಚಿನ ತಾಸು ಏಕಾಗ್ರತೆಯಿಂದ ಓದುವುದನ್ನು ರೂಢಿಸಿಕೊಳ್ಳಬೇಕು ಎಂದರು.
ನಗರಸಭೆ ಪೌರಾಯುಕ್ತೆ ಗೀತಾ ಮಾತನಾಡಿ, ಹಿಂದೆ ಗುರುಕುಲ ಪದ್ಧತಿಯಿತ್ತು. ಗುರು ಶಿಷ್ಯರ ನಡುವೆ ಉತ್ತಮ ಬಾಂಧವ್ಯವಿರುತ್ತಿತ್ತು. ಗುರುಗಳು ಮುಂದೆ ನಿಂತು ಮಾರ್ಗದರ್ಶನ ತೋರುತ್ತಿದ್ದರು. ಆದರೆ, ಈಗ ಸ್ಪರ್ಧಾತ್ಮಕ ಯುಗ. ಕೇವಲ ಮಾರ್ಗದರ್ಶನವಿದ್ದರೆ ಸಾಲದು, ನಮ್ಮ ಸ್ವಂತ ಕ್ರಿಯಾಶೀಲತೆ, ಕೌಶಲ, ಪ್ರತಿಭೆಗೆ ಎಲ್ಲೆಡೆ ಮನ್ನಣೆ ಸಿಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಗುರು ಹಿರಿಯರ ಮಾರ್ಗದರ್ಶನದ ಜತೆಗೆ ಸ್ವಂತ ಶಕ್ತಿಯ ಮೇಲೆ ಬೆಳವಣಿಗೆ ಕಾಣಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ ಮಾತನಾಡಿ, 2024-25ನೇ ಸಾಲಿನಲ್ಲಿ 55 ಶಾಲೆಗಳಲ್ಲಿ 3633 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದು, ಈಗಾಗಲೇ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಭಾನುವಾರದ ತರಗತಿ, ಗುಂಪು ಅಧ್ಯಯನ, ಶಿಕ್ಷಕರಿಗೆ ವಿಷಯವಾರು ಕಾರ್ಯಗಾರ ಸೇರಿದಂತೆ 20 ಅಂಶಗಳ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಶ್ರೀನಿವಾಸ್, ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಮಾತನಾಡಿದರು.
ನಗರ ಪೊಲೀಸ್ ಠಾಣೆ ಪಿಎಸ್‌ಐ ಗೋಪಾಲ್, ಆಶ್ರಯ ಸಮಿತಿ ಸದಸ್ಯ ನಾಗೇಂದ್ರ ಇತರರು ಇದ್ದರು.
ಯಶಸ್ವಿ ಉದ್ಯಮಿ ರಾಜಕಾರಣಿಯಾದೆ
ನಾನು 10ನೇ ತರಗತಿ ಓದುವಾಗ ಆಂಗ್ಲ ಮತ್ತು ಗಣಿತ ವಿಷಯದಲ್ಲಿ ಕಡಿಮೆ ಅಂಕ ಬರುತ್ತಿತ್ತು. ನೀನು ಪಾಸಾಗುವುದಿಲ್ಲ. ಮನೆಯ ಹಿರಿಯ ಮಗ. ಓದುವುದನ್ನು ಬಿಟ್ಟು ಕೃಷಿ ಮಾಡಿಕೊಂಡಿರು ಎಂದು ನಮ್ಮ ತಂದೆ ನನ್ನನ್ನು ಎಚ್ಚರಿಸಿದರು. ಆ ಸಂದರ್ಭದಲ್ಲಿ ನಾನು ಯೋಚನೆ ಮಾಡಿ ಶಿಕ್ಷಕರ ಜತೆ ಹಾಗೂ ಆಂಗ್ಲ ಹಾಗೂ ಗಣಿತದಲ್ಲಿ ಉತ್ತಮವಾಗಿ ಓದುತ್ತಿದ್ದ ನನ್ನ ಸಹಪಾಠಿಗಳೊಂದಿಗೆ ಎರಡು ವಿಷಯಗಳ ಬಗ್ಗೆ ಅಧ್ಯಯನ ಮಾಡಿ ಎಸ್ಸೆಸ್ಸೆಲ್ಸಿ ಉತ್ತೀರ್ಣನಾದೆ. ಬೆಂಗಳೂರಿನಲ್ಲಿ ಬಂದು ಪದವಿಯನ್ನೂ ಪೂರ್ಣಗೊಳಿಸಿದೆ. ಇಂದು ಯಶಸ್ವಿ ಉದ್ಯಮಿ ಹಾಗೂ ರಾಜಕಾರಣಿಯಾದೆ. ಹಾಗಾಗಿ ಏಕಾಗ್ರತೆಯಿಂದ ಗುರಿಯೆಡೆಗೆ ಸಾಗಿದರೆ ಯಶಸ್ಸು ನಿಶ್ಚಿತ ಎಂದು ಪುಟ್ಟಸ್ವಾಮಿ ಗೌಡ ತಿಳಿಸಿದರು.