ಮಳೆಯ ಆರ್ಭಟಕ್ಕೆ ಜನಜೀವನ ಸ್ತಬ್ಧ

ಮಳೆಯ ಆರ್ಭಟಕ್ಕೆ ಜನಜೀವನ ಸ್ತಬ್ಧ
Published on

ಸಕಲೇಶಪುರ: ತಾಲೂಕಿನಾದ್ಯಂತ ಶುಕ್ರವಾರ ಕೂಡ ಗಾಳಿಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಸ್ತಬ್ಧಗೊಂಡಿದೆ.
ಗುರುವಾರ ಸಂಜೆಯಿಂದ ಗಾಳಿಯ ವೇಗ ಹೆಚ್ಚಿದ್ದು, ಸಾಕಷ್ಟು ಮರಗಿಡಗಳು ಧರೆಗುರುಳಿವೆ.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶುಕ್ರವಾರ ಕೂಡ ಹಲವು ಕಡೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಮುನ್ನೆಚ್ಚರಿಕೆ ಕೈಗೊಂಡಿರುವ ಜಿಲ್ಲಾಡಳಿತ ಮಂಗಳೂರು-ಬೆಂಗಳೂರು ನಡುವಿನ ಸಂಚಾರಕ್ಕೆ ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ಅವಕಾಶ ಕಲ್ಪಿಸಿದೆ. ಅದೇ ರೀತಿ ರಾತ್ರಿ ಸಮಯದಲ್ಲಿ ಶಿರಾಡಿಘಾಟ್ ರಸ್ತೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಖಡಿತಗೊಂಡಿದ್ದು, ಸೆಸ್ಕ್ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪಟ್ಟಣದ ಹೊಳೆಮಲ್ಲೇಶ್ವರಸ್ವಾಮಿ ದೇಗುಲ ಜಲಾವೃತವಾಗುವ ಸಾಧ್ಯತೆ ಇದೆ.
ನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಅಜಾದ್ ರಸ್ತೆಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ತಾಲೂಕಿನ ಉಳಿದ ಏಳು ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವೆಡೆ ಭತ್ತದ ಗದ್ದೆಗಳು ಜಲಾವೃತವಾಗಿವೆ.

ಬಾಗಿನ ಅರ್ಪಣೆ: ತುಂಬಿ ಹರಿಯುತ್ತಿರುವ ಹೇಮಾವತಿ ನದಿಗೆ ಶಾಸಕ ಸಿಮೆಂಟ್ ಮಂಜು ದಂಪತಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ತಹಸೀಲ್ದಾರ್ ಮೇಘನಾ, ಇಒ ರಾಮಕೃಷ್ಣ ಇತರರು ಇದ್ದರು.

ಹಾನಿ ಪ್ರದೇಶಕ್ಕೆ ಶಾಸಕರ ಭೇಟಿ: ನಿರಂತರ ಭೂ-ಕುಸಿತ ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಗ್ರಾಮದಿಂದ ದೊಡ್ಡತಪ್ಪಲೆ ಗ್ರಾಮದವರಗಿನ ಅವ್ಯವಸ್ಥೆಯನ್ನು ಶಾಸಕ ಸಿಮೆಂಟ್ ಮಂಜು ವೀಕ್ಷಣೆ ನಡೆಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಚತುಷ್ಪಥ ರಸ್ತೆ ಕಾಮಗಾರಿ ಹೊಣೆ ಹೊತ್ತಿರುವ ರಾಜ್‌ಕಮಲ್ ಗುತ್ತಿಗೆ ಕಂಪನಿಯ ಅಧಿಕಾರಿಗಳು ಅಪಾಯಕಾರಿ ಪ್ರದೇಶದಲ್ಲೇ ಠಿಕಾಣಿ ಹೂಡಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

27 ಮನೆಗೆ ಹಾನಿ: ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ 27 ಮನೆಗಳು ಹಾನಿಗೊಂಡಿವೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ.

ರಾತ್ರಿ ಇಡೀ ರಸ್ತೆಯಲ್ಲೇ ಕಳೆದ ಸಾರ್ವಜನಿಕರು: ಗುರುವಾರ ಸಂಜೆ ಆರು ಗಂಟೆವೇಳೆಯಲ್ಲಿ ಶಿರಾಡಿಘಾಟ್ ಮಾರ್ಗದಲ್ಲಿ ಸಂಜೆ 7ರ ನಂತರ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಸ್ಥಳೀಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶವನ್ನು ಚಾಚುತಪ್ಪದೆ ಪಾಲಿಸಿದ ಪರಿಣಾಮ, ಈ ಮಾರ್ಗದಲ್ಲಿ ಬಂದ ಸಾಕಷ್ಟು ವಾಹನ ಸವಾರರು ರಾತ್ರಿ ಇಡೀ ಹೆದ್ದಾರಿಯಲ್ಲೇ ಕಳೆಯುವಂತಾಯಿತು. ಗುರುವಾರ ಸಂಜೆಯಿಂದ, ಶುಕ್ರವಾರ ಬೆಳಗ್ಗೆವರೆಗೆ ರಾಷ್ಟ್ರೀಯ ಹೆದ್ದಾರಿ 75 ಎರಡು ಬದಿಯಲ್ಲಿ ವಾಹನಗಳು ಹತ್ತಾರು ಕಿ.ಮೀ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು. ಜಿಲ್ಲಾಧಿಕಾರಿಗಳ ತಕ್ಷಣದ ನಿರ್ಧಾರದಿಂದ ಕುಟುಂಬ ಸಹಿತ ಹೆದ್ದಾರಿಯಲ್ಲೇ ರಾತ್ರಿ ಕಳೆಯುವಂತಾಯಿತು ಎಂದು ಸಾಕಷ್ಟು ವಾಹನ ಸವಾರರು ಶಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net