

ಉಪ್ಪಿನಬೆಟಗೇರಿ: ಜೀವನದ ಜಂಜಡ ಹಾಗೂ ಒತ್ತಡಯುತ ಬದುಕಿನಿಂದ ಹೊರಬರಲು ಪ್ರತಿಯೊಬ್ಬರೂ ನಿತ್ಯ ಯೋಗ, ಧ್ಯಾನ ಮಾಡುವ ಮೂಲಕ ಸುಖ ಜೀವನ ನಡೆಸಬೇಕು ಎಂದು ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀ ಗುರು ವಿರೂಪಾಕ್ಷೇಶ್ವರ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿಯ ಶ್ರೀ ರಾಮಚಂದ್ರ ಮಿಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಧ್ಯಾನ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.
ಇತ್ತೀಚಿನ ದಿನಗಳಲ್ಲಿ ನಾವು ದೈನಂದಿನ ಆಹಾರದಲ್ಲಿ ಸತ್ವಯುತ ಪದಾರ್ಥಗಳ ಬಳಕೆ ಕಡಿಮೆಯಾಗಿ ಆರೋಗ್ಯ ತೊಂದರೆ ಅನುಭವಿಸುತ್ತಿದ್ದೇವೆ. ಇವುಗಳಿಂದ ರಕ್ಷಿಸಿಕೊಳ್ಳಲು ನಿಯಮಿತ ಆಹಾರವನ್ನು ಕ್ರಮಬದ್ಧವಾಗಿ ಸ್ವೀಕರಿಸುವ ಜತೆಗೆ ಪ್ರತಿದಿನ ಬೆಳಗ್ಗೆ ಯೋಗ ಮತ್ತು ಧ್ಯಾನದಲ್ಲಿ ತೊಡಗಿಕೊಳ್ಳಬೇಕು.
ಇದರಿಂದ ಶಾರೀರಿಕ ಪ್ರಜ್ಞೆ, ಮಾನಸಿಕ ಶಾಂತಿ, ಒತ್ತಡ ರಹಿತ ಜೀವನ, ಏಕಾಗ್ರತೆ, ಸ್ಮರಣ ಶಕ್ತಿ, ಸಹನಶೀಲತೆ ಹಾಗೂ ಕ್ರಿಯಾಶೀಲತೆ ಪ್ರಾಪ್ತಿಯಾಗಿ ಆರೋಗ್ಯ ಸುಧಾರಿಸಿ ಮನಸು ಹಗುರಗೊಳ್ಳುತ್ತದೆ ಎಂದರು.
ಪ್ರಶಿಕ್ಷಕ ಶ್ರೀಧರ ಚಕ್ರವರ್ತಿ ಶಿಬಿರದಲ್ಲಿ ಭಾಗವಹಿಸಿದವರಿಗೆ ಧ್ಯಾನದ ಕುರಿತು ಸಮಗ್ರ ಮಾಹಿತಿ ನೀಡಿದರು.
ನಿಜಗುಣಿ ಹೂಲಿ, ಪ್ರಭು ಕೇಶಗೊಂಡ, ಧರಣೇಂದ್ರ ಅಷ್ಟಗಿ, ಶಂಕರ ಓರಣಕರ, ಡಾ. ನಾಗಯ್ಯ ಗಚ್ಚಿನಮಠ, ಶಿವಶಂಕರ ಬೀಡಿ, ಗಂಗಪ್ಪ ತಳವಾರ, ಬಸವರಾಜ ಗಾಣಿಗೇರ, ಕಲ್ಲಯ್ಯ ವಿಭೂತಿಮಠ, ಕಲ್ಲಪ್ಪ ಹಟ್ಟಿ, ಚನಬಸಪ್ಪ ಲಗಮಣ್ಣವರ, ಶಿವಾನಂದ ಪರಾಂಡೆ, ಮಹಾಂತೇಶ ಚಿಕ್ಕಮಠ, ಅಶೋಕ ಪಾಗಾದ, ವಿರೂಪಾಕ್ಷಪ್ಪ ಬಮ್ಮಶೆಟ್ಟಿ, ಕೃಷ್ಣಾ ಬುದ್ನಿ, ಸದಾನಂದ ಕೊರಕೊಪ್ಪ, ಮಹಾಂತೇಶ ಸಿದ್ರಾಮಯ್ಯನಮಠ, ಕಿರಣ ಚಂದರಗಿ ಇದ್ದರು.