ಕೊಲೆ ಮಾಡಿದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Published on

2 ವರ್ಷಗಳ ನಂತರ ಜಿಲ್ಲಾ ನ್ಯಾಯಾಲಯ ತೀರ್ಪು | ಪತ್ನಿ ಜತೆಗೆ ಮಾತನಾಡದಂತೆ ಎಚ್ಚರಿಕೆ ನೀಡಿದ ಪತಿಯ ಹತ್ಯೆ

ಬಾಗೇಪಲ್ಲಿ : ಹೆಂಡತಿಯೊಂದಿಗೆ ಮಾತನಾಡುವುದನ್ನು ಪ್ರಶ್ನಿಸಿದ್ದ ಪತಿಯನ್ನೇ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯ ಸೆ.23ರಂದು ತೀರ್ಪು ನೀಡಿದೆ.
ವೆಂಕಟರಾಮ್, ನವೀನ್ ಶಿಕ್ಷೆಗೆ ಗುರಿಯಾದವರು.
ಘಟನೆ ವಿವಿರ: ಬಾಗೇಪಲ್ಲಿಯ ರಾಷ್ಟ್ರೀಯ ಹೆದ್ದಾರಿ 44ರ ನಾರೇಪಲ್ಲಿ ಟೋಲ್ ಪ್ಲಾಜಾ ಬಳಿಯ ವೇಬ್ರೀಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಆದಿಗಾನಹಳ್ಳಿಯ ಶ್ರೀನಿವಾಸ್ ಮನೆಯಲ್ಲೇ ಸೋದರ ಸಂಬಂಧಿಯಾದ ವೆಂಕಟರಾಮ್ ವಾಸವಿದ್ದ. ಈ ವೇಳೆ ಶ್ರೀನಿವಾಸ್ ಪತ್ನಿ ಜತೆ ವೆಂಕಟರಾಮ್ ಸಲುಗೆಯಿಂದ ಮಾತನಾಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು, ಪತ್ನಿಯೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿದ ವೆಂಕಟರಾಮ್‌ನನ್ನು ಶ್ರೀನಿವಾಸ್ ಮನೆಯಿಂದ ಹೊರಗೆ ಕಳಿಸಿದ್ದ.
ಶ್ರೀನಿವಾಸ್ ಕೊಲೆಗೆ ಸಂಚು ರೂಪಿಸಿದ್ದ ವೆಂಕಟರಾಮ್, 2022ರ ಏಪ್ರಿಲ್ 4ರಂದು ರಾತ್ರಿ ಪಾಳಿ ಕೆಲಸಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶ್ರೀನಿವಾಸ್‌ನನ್ನು ಆದಿಗಾನಹಳ್ಳಿ ಕ್ರಾಸ್ ಬಳಿ ಅಡ್ಡಗಟ್ಟಿ ತಲೆಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ್ದ. ಮರುದಿನ ಮಣ್ಣಿನ ರಸ್ತೆಯಲ್ಲಿ ಶ್ರೀನಿವಾಸ್‌ನ ಶವ ಬಿದ್ದಿರುವ ಬಗ್ಗೆ ಸಂಬಂಧಿಕರು
ಬಾಗೇಪಲ್ಲಿ ಠಾಣೆಗೆ ದೂರು ನೀಡಿದ್ದರು. ಮೃತನಿಗೆ ಹೆಂಡತಿ, ಒಂದು ಹೆಣ್ಣುಮಗು ಇದ್ದು, ಅಂದಿನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ನಾಗರಾಜು ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿಗಳಾದ ವೆಂಕಟರಾಮ್ ಮತ್ತು ನವೀನ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಧರ್, ಅಪರಾಧಿಗಳಾದ ವೆಂಕಟರಾಮ್ ಹಾಗೂ ನವೀನ್‌ಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net