

ರಾಮನಗರದಲ್ಲೂ ಲಿಡ್‌ಕರ್ ಮಳಿಗೆ
* ಸೆಪ್ಟೆಂಬರ್ ಮೊದಲ ವಾರದಿಂದಲೇ ವ್ಯಾಪಾರ ಶುರು
* ಚರ್ಮದ ಉತ್ಪನ್ನ ಪ್ರಿಯರಿಗೆ ಹಲವು ವಸ್ತುಗಳು
ಗಂಗಾಧರ ಬೈರಾಪಟ್ಟಣ ರಾಮನಗರ
ಕಳೆದ ಕೆಲ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಜಿಲ್ಲೆಯ ಚರ್ಮದ ಉತ್ಪನ್ನಗಳ ಪ್ರಿಯರಿಗೆ ಸಿಹಿ ಸುದ್ದಿ ನೀಡಿರುವ ಲಿಡ್‌ಕರ್ ತನ್ನ ಮಳಿಗೆಯನ್ನು ಜಿಲ್ಲಾ ಕೇಂದ್ರ ರಾಮನಗರದಲ್ಲಿ ಆರಂಭಿಸಿದೆ.
ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳಿಗೆ ಹೊಂದಿರುವ ಲಿಡ್‌ಕರ್ ರಾಮನಗರದಲ್ಲಿಯೂ ಸಹ ಶೋರೂಂಅನ್ನು ‘ಗ್ರಾಹಕರೇ ದೇವರು’ ಎನ್ನುವ ಗಾಂಧಿ ತತ್ವದ ಆಧಾರದ ಮೇಲೆ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಆರಂಭಿಸುವ ಮೂಲಕ ಮೆಚ್ಚುಗೆಗೂ ಪಾತ್ರವಾಗಿದೆ. ಜೇಬಿಗೆ ಭಾರವಲ್ಲದ ಚರ್ಮದ ಉತ್ಕೃಷ್ಟ ಉತ್ಪನ್ನಗಳಿಗೆ ಲಿಡ್‌ಕರ್ ಹೆಸರಾಗಿದ್ದು, ಚರ್ಮೋದ್ಯಮ ಹಾಗೂ ಅದರ ಉತ್ಪನ್ನಗಳಿಗೆ ಬ್ರ್ಯಾಂಡ್ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ(ಲಿಡ್‌ಕರ್) ಜಿಲ್ಲೆಯಲ್ಲಿ ಪ್ರಥಮ ಶೋರೂಂ ತೆರೆದಿದೆ.
ಮಳಿಗೆಯಲ್ಲಿ ಹ್ಯಾಂಡ್ ಬ್ಯಾಗ್‌ನಿಂದ ಆರಂಭಗೊಂಡು ಲ್ಯಾಪ್ ಟಾಪ್ ಬ್ಯಾಗ್‌ಗಳವರೆಗೆ, ಚಪ್ಪಲಿಯಿಂದ ಆರಂಭಗೊಂಡು ಜಾಕೆಟ್‌ವರೆಗೆ ವಿವಿಧ ಉತ್ಪನ್ನ ಲಭ್ಯವಿರಲಿವೆ. ಎಲ್ಲವನ್ನೂ ಚರ್ಮದಲ್ಲಿಯೇ ಸಿದ್ಧಪಡಿಸಲಾಗಿದೆ. ಚಪ್ಪಲಿ, ಶೂ, ಬೆಲ್ಟ್‌ಗಳು, ಮಹಿಳೆಯರು ಸಣ್ಣ ಪರ್ಸ್‌ಗಳು, ಹ್ಯಾಂಡ್ ಬ್ಯಾಗ್‌ಗಳು ಸೇರಿ ಹಲವು ಉತ್ಪನ್ನಗಳು ಇವೆ. ಇಲ್ಲಿ 350 ರೂ.ನಿಂದ ಆರಂಭಗೊಂಡು ಗರಿಷ್ಠ 8 ಸಾವಿರ ರೂ. ವರೆಗಿನ ಉತ್ಪನ್ನ ಲಭ್ಯವಿವೆ. ಇನ್ನು ಲಿಡ್‌ಕರ್‌ನಲ್ಲಿ ಮಾರಾಟಕ್ಕೆ ಲಭ್ಯವಿರುವ ವಸ್ತುಗಳು ಖಾಸಗಿ ಕಂಪನಿಗಳ ಉತ್ಪನ್ನಕ್ಕೆ ಹೋಲಿಸಿದರೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ. ಖಾಸಗಿ ಕಂಪನಿಯ ಚರ್ಮದ ಉತ್ಪನ್ನಗಳ ಬೆಲೆ ಹೆಚ್ಚು, ಇವು ಕೇವಲ ಶ್ರೀಮಂತ ವರ್ಗಕ್ಕೆ ಎನ್ನುವ ಮಾತಿದೆ. ಆದರೆ, ಗುಣಮಟ್ಟದ ಚರ್ಮದ ವಿವಿಧ ಉತ್ಪನ್ನಗಳು ಲಿಡ್‌ಕರ್‌ನಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದು ಮಧ್ಯಮ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಖುಷಿ ತಂದಿದೆ.
ಲಿಡ್‌ಕರ್ ಉತ್ಪನ್ನಗಳ ಮಾರಾಟ ಮಳಿಗೆ ರಾಮನಗರದಲ್ಲಿ ಆರಂಭಗೊಂಡಿರುವುದು ಗ್ರಾಹಕರ ಸಂತಸಕ್ಕೂ ಕಾರಣವಾಗಿದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಉತ್ಪನ್ನಗಳ ಖರೀದಿಗೆ ಮುಂದಾಗಿದ್ದಾರೆ. ಪ್ರಸ್ತುತ ಮಳಿಗೆಯಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದು, ಇವರು ಗ್ರಾಹಕರಿಗೆ ಪ್ರತಿ ಉತ್ಪನ್ನದ ಬಗ್ಗೆ ಮಾಹಿತಿ ನೀಡುವ ಮೂಲಕ ಖರೀದಿಗೆ ಉತ್ತೇಜನ ನೀಡುತ್ತಿದ್ದಾರೆ.
ಪಾರಂಪರಿಕವಾಗಿ ಚರ್ಮದ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಪರಿಶಿಷ್ಟ ಸಮುದಾಯದ ಚರ್ಮ ಕುಶಲ ಕರ್ಮಿಗಳ ಕೌಶಲವನ್ನು ಗೌರವಿಸುವ ಮತ್ತು ಈ ಸಮುದಾಯಕ್ಕೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಆರಂಭಗೊಂಡ ಲಿಡ್‌ಕರ್ ನಿಗಮ, ಉದ್ದೇಶದ ಈಡೇರಿಯಲ್ಲಿ ಯಶಸ್ವಿಯಾಗಿಯೂ ಆಗಿದೆ. ಮಳಿಗೆಗಳ ಮೂಲಕ ಚರ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುತ್ತಿದ್ದ ನಿಗಮ, ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವ ಮೂಲಕ ಆನ್‌ಲೈನ್ ಖರೀದಿಗೂ ಗ್ರಾಹಕರಿಗೆ ಅವಕಾಶ ನೀಡಿದೆ. ಲಿಡ್‌ಕರ್‌ನ ‘ಶಾಪ್ ಲಿಡ್‌ಕರ್ ಡಾಟ್ ಕಾಂ’ ಮೂಲಕ ಉತ್ಪನ್ನಗಳನ್ನು ಖರೀದಿಸಬಹುದು. ಇದರ ಜತೆಗೆ, ದೇಶದ ಪ್ರಮುಖ ಆನ್‌ಲೈನ್ ವಹಿವಾಟು ಸಂಸ್ಥೆಗಳಾದ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್‌ನಲ್ಲಿಯೂ ಲಿಡ್‌ಕರ್ ಉತ್ಪನ್ನಗಳು ಶೀಘ್ರದಲ್ಲಿ ಲಭ್ಯವಾಗಲಿದ್ದು, ಈ ಸಂಬಂಧ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಲಿಡ್‌ಕರ್ ಪೂರ್ಣಗೊಳಿಸಿದೆ.
ಪ್ರತಿಷ್ಠಿತ ಕೊಲ್ಹ್ಲಾಪುರಿ ಚಪ್ಪಲಿ ಮಾರಾಟ ಸಂಬಂಧ ಇಟಲಿಯ ಕಂಪನಿ ಪ್ರಾಡಾ ಲಿಡ್‌ಕರ್ ಜತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಜಿಐ ಟ್ಯಾಗ್ ಹೊಂದಿರುವ ಕೊಲ್ಹ್ಲಾಪುರಿ ಚಪ್ಪಲಿಯನ್ನು ಪ್ರಾಡಾ ಕಂಪನಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದನ್ನು ಕರ್ನಾಟಕ ಚರ್ಮೋದ್ಯಮ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ, ಡಾ.ಕೆ.ಎಂ.ವಸುಂಧರಾ ಪತ್ತೆ ಹಚ್ಚಿ, ಇದರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದರು. ಅಂತಿಮವಾಗಿ ಇದರಲ್ಲಿ ಜಯ ಲಭ್ಯವಾಗಿದ್ದು, ಪ್ರಾಡಾ ಸಂಸ್ಥೆಯೇ ಲಿಡ್‌ಕರ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಕೊಲ್ಲಾಪುರಿ ಚಪ್ಪಲಿಯನ್ನು ಖರೀದಿಸಲು ಮುಂದೆ ಬಂದಿದೆ. ಇದರಿಂದ ಕೊಲ್ಲಾಪುರಿ ಚಪ್ಪಲಿ ತಯಾರಿ ಮಾಡುವ ಬೆಳಗಾವಿ ಜಿಲ್ಲೆಯ ಅಥಣಿ, ನಿಪ್ಪಾಣಿ ಸೇರಿ ವಿವಿಧ ಭಾಗದ ಕುಶಲ ಕರ್ಮಿಗಳಿಗೆ ಹೆಚ್ಚಿನ ಉದ್ಯೋಗ, ಮಾರುಕಟ್ಟೆ ಮತ್ತು ಆರ್ಥಿಕ ಬಲವೂ ದೊರೆತಂತೆ ಆಗಲಿದೆ.