ಲೈಸೆನ್ಸ್ ಸರ್ವೆಯರ್ ಎಸಿಬಿ ಬಲೆಗೆ: 05 ಗುಂಟೆ ಸರ್ವೆ ನಕ್ಷೆಗೆ 22 ಸಾವಿರ ಲಂಚಕ್ಕೆ ಬೇಡಿಕೆ

ACB
Published on

ಬೆಂಗಳೂರು: ಐದು ಗುಂಟೆ ಜಮೀನಿಗೆ ಸರ್ವೆ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಲೈಸೆನ್ಸ್ ಸರ್ವೆಯರ್ ರೆಡ್‌ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಗೆ ಸೆರೆಸಿಕ್ಕಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿ ಲೈಸೆನ್ಸ್ ಸರ್ವೆಯರ್ ಜಿ. ಬಸವರಾಜು ಟ್ರ್ಯಾಪ್ ಆದ ಆರೋಪಿ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿ ಗುಳಕಮಲೆ ಗ್ರಾಮದ ನಿವಾಸಿ ಗುಳಕಮಲೆ ಗ್ರಾಮ ಸರ್ವೆ ನಂ.119/15ರ ಪೈಕಿ 05 ಗುಂಟೆ ಜಮೀನನ್ನು ಖರೀದಿಸಲು ಕರಾರು ಪತ್ರ ಮಾಡಿಕೊಂಡಿದ್ದರು. ಕ್ರಯ ಪತ್ರಕ್ಕೆ ಸ್ಕೆಚ್ ಬೇಕಾಗಿದ್ದರಿಂದ ಉತ್ತರಹಳ್ಳಿ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ದಕ್ಷಿಣ ತಾಲ್ಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಲೈಸೆನ್ಸ್ ಸರ್ವೆಯರ್ ಜಿ. ಬಸವರಾಜು, 05 ಗುಂಟೆಗೆ ಸ್ಕೆಚ್ ನೀಡಲು 45 ಸಾವಿರ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು. ಚೌಕಾಸಿ ಮಾಡಿ 22 ಸಾವಿರ ರೂ.ಗೆ ಒಪ್ಪಿ ಮುಂಗಡವಾಗಿ 10 ಸಾವಿರ ರೂ. ಪಡೆದುಕೊಂಡಿದ್ದರು. ಉಳಿಕೆ 12 ಸಾವಿರ ರೂ. ಕೊಡುವಂತೆ ಬೇಡಿಕೆ ಒಡ್ಡಿದ್ದರು.

ಈ ಬಗ್ಗೆ ಅರ್ಜಿದಾರ ಕೊಟ್ಟ ದೂರಿನ ಮೇರೆಗೆ ರಾಮನಗರ ಜಿಲ್ಲಾ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಟ್ರ್ಯಾಪ್‌ಗೆ ಸಿದ್ದಪಡಿಸಿದ್ದರು. ಗುರುವಾರ ಬೆಂಗಳೂರು ದಕ್ಷಿಣ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 12 ಸಾವಿರ ರೂ. ಪಡೆಯುತ್ತಿದ್ದಾಗ ಬಸವರಾಜುನನ್ನು ಬಂಧಿಸಿರುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net