ಗ್ರಂಥಾಲಯಕ್ಕಿಲ್ಲ ಸರ್ಕಾರದ ಅನುದಾನ ; ಮೇಲ್ವಿಚಾರಕ ಗಣೇಶ್ ಆರೋಪ * ಸೀಗೆಕುಪ್ಪೆಯಲ್ಲಿಲ್ಲ ಓದುಗರಿಗೆ ಸೌಲಭ್ಯ

MM BBB
Published on

ಮಾಗಡಿ: ಸೀಗೆಕುಪ್ಪೆ ಗ್ರಂಥಾಲಯದ ನಿರ್ವಹಣೆಗೆ ಸರ್ಕಾರದಿಂದ ಬಂದ ಹಣವನ್ನು ಗ್ರಾಪಂಗೆ ನೀಡದೆ ಓದುಗರಿಗೆ ತೊಂದರೆಯಾಗಿದೆ ಎಂದು ಗ್ರಂಥಾಲಯ ಮೇಲ್ವಿಚಾರಕ ಗಣೇಶ್ ಆರೋಪಿಸಿದರು.

ತಾಲೂಕಿನ ಸೀಗೆಕುಪ್ಪೆ ಗ್ರಂಥಾಲಯದ ಸಮಸ್ಯೆ ಬಗ್ಗೆ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ರಾಜ್ಯದ ಎಲ್ಲ ಗ್ರಂಥಾಲಯಗಳ ನಿರ್ವಹಣೆ ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿತ್ತು. ಈಗ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬಂದ ಕಾರಣ ಗ್ರಂಥಾಲಯಗಳು ಡಿಜಿಟೀಲೀಕರಣ ಹೊಂದಿದ್ದು, ಗ್ರಂಥಾಲಯಗಳ ನಿರ್ವಹಣೆಗೆ ಸರ್ಕಾರ ಗ್ರಾಪಂಗೆ ಅನುದಾನ ಬಿಡುಗಡೆ ಮಾಡುತ್ತದೆ.

ಆದರೆ, ಸೀಗೆಕುಪ್ಪೆ ಗ್ರಾಪಂ ಪಿಡಿಒ ಪ್ರಭಾರಿ ಆದ ಕಾರಣ ಎಲ್ಲ ನಿರ್ವಹಣೆಯನ್ನು ಕಾರ್ಯದರ್ಶಿ ಪ್ರಕಾಶ್ ನಿರ್ವಹಿಸಿರುವುದರಿಂದ ಸರ್ಕಾರದಿಂದ ಗ್ರಂಥಾಲಯಕ್ಕೆ ಬಿಡುಗಡೆಯಾದ ಅನುದಾನವನ್ನು ಎರಡು ತಿಂಗಳು ಕಳೆದರೂ ಕಾರ್ಯದರ್ಶಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ದಿನಪತ್ರಿಕೆಗಳ ಖರೀದಿ, ವಿದ್ಯುತ್ ಬಿಲ್ ನೀಡಲು ಸಾಧ್ಯವಾಗುತ್ತಿಲ್ಲ, ಮನಸ್ಸಿಗೆ ಬಂದ ವೇಳೆ ನಮಗೆ ವೇತನ ನೀಡುತ್ತಾರೆ. ಗ್ರಂಥಾಲಯದಲ್ಲಿ ವಿದ್ಯುತ್, ಕಿಟಕಿಗಳಿಲ್ಲ, ಹಾವುಗಳು ನುಗ್ಗುತ್ತಿವೆ. ಕಟ್ಟಡ ಮಳೆಗೆ ಸೋರಿ ಪುಸ್ತಕಗಳು ಹಾಳಾಗಿವೆ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಪಂಗೆ ಮಾಹಿತಿ ನೀಡಿದರೂ ಸರಿಪಡಿಸಲು ಮುಂದಾಗಿಲ್ಲ ಎಂದರು.

ಮೂಲಸೌಕರ್ಯ ಒದಗಿಸಿ ಸರ್ಕಾರ ನೀಡುವ ಅನುದಾನವನ್ನು ಗ್ರಾಪಂ ಕೂಡಲೇ ಬಿಡುಗಡೆಗೊಳಿಸಬೇಕು, ಡಿಜಿಟಲ್ ಗ್ರಂಥಾಲಯವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಂಥಾಲಯ ಮೇಲ್ವಿಚಾರಕ ಬಾಗಿಲನ್ನು ಸರಿಯಾದ ಸಮಯಕ್ಕೆ ತೆಗೆಯುವುದಿಲ್ಲ, ಬೋರ್ಡ್ ಹಾಕಿರಲಿಲ್ಲ. ನಾವು ಹಾಕಿಸಿದ್ದೇವೆ, ಸರ್ಕಾರದಿಂದ 3 ತಿಂಗಳಿಗೊಮ್ಮೆ ಅನುದಾನ ಬರುತ್ತದೆ. ಬಂದ ಕೂಡಲೇ ಹಣ ಬಿಡುಗಡೆ ಮಾಡುತ್ತೇವೆ. ಯಾವುದೇ ತೊಂದರೆ ನೀಡುತ್ತಿಲ್ಲ. ಪ್ರಕಾಶ್ ಸೀಗೆಕುಪ್ಪೆ ಗ್ರಾಪಂ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net