

* ಕೈದಿಯೇ ಟೀಚರ್, ಬಂಧಿಗಳೇ ವಿದ್ಯಾರ್ಥಿಗಳು
* ಕನ್ನಡ ಕಲಿತ ಕನ್ನಡೇತರರು
ಗಂಗಾಧರ್ ಬೈರಾಪಟ್ಟಣ ರಾಮನಗರ
ಗಾಂಜಾ, ಮೊಬೈಲ್ ಬಳಕೆ, ಐಷಾರಾಮಿ ಜೀವನ ಹೀಗೆ ಸಾಲುಸಾಲು ಅಕ್ರಮಗಳ ಮೂಲಕವೇ ಇತ್ತೀಚಿನ ದಿನಗಳಲ್ಲಿ ಕಾರಾಗೃಹಗಳು ಸುದ್ದಿಯಲ್ಲಿವೆ. ಇಂತಹ ಘಟನೆಗಳ ಹೊರತಾಗಿಯೂ ಅಕ್ಷರ ಜ್ಞಾನವೇ ಇಲ್ಲದೆ ಜೈಲು ಸೇರುವ ಕೈದಿಗಳಿಗೆ ಅಕ್ಷರ ಜ್ಞಾನ ನೀಡುವ ಕಾರ್ಯವೂ ಸದ್ದಿಲ್ಲದೆ ನಡೆಯುತ್ತಿದ್ದು, ನೂರಾರು ಮಂದಿ ಅಕ್ಷರ ಕಲಿತು ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ.
‘ಕಲಿಕೆಯಿಂದ ಬದಲಾವಣೆ’ ಶೀರ್ಷಿಕೆಯಡಿ ವಿಚಾರಣಾಧೀನ ಬಂಧಿಗಳಿಗೆ ಅಕ್ಷರ ಕಲಿಸುವ ಕಾರ್ಯ ನಡೆಯುತ್ತಿದ್ದು, ಇದರಿಂದ ಪ್ರತಿ ವರ್ಷ ಕನಿಷ್ಠ 30 ಮಂದಿ ಅಕ್ಷರ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ. ಒಂದು ವರ್ಷದ ತರಬೇತಿ ನಂತರ ನಡೆಯುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನವ ಸಾಕ್ಷರರ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಾಮನಗರ ಕಾರಾಗೃಹದಿಂದ 120 ಮಂದಿ ಸಾಕ್ಷರರಾಗಿದ್ದು, ಪ್ರಸ್ತುತ ಸಾಲಿನಲ್ಲಿ 30 ಮಂದಿ ಅಕ್ಷರ ಕಲಿಯುತ್ತಿದ್ದಾರೆ. ಕಾರಾಗೃಹದಲ್ಲಿ ನೀಡುವ ಶಿಕ್ಷಣಕ್ಕೆ ಸಂಬಂಧಿಸಿದ ವರದಿಯನ್ನು ಕಾರಾಗೃಹ ಇಲಾಖೆಯ ಮಹಾನಿರ್ದೇಶಕರು, ಉಪ ಮಹಾನಿರೀಕ್ಷಕರು ಹಾಗೂ ಕೇಂದ್ರ ಕಾರಾಗೃಹಕ್ಕೆ ಸಲ್ಲಿಸುವ ಕಾರ್ಯವನ್ನು ಜೈಲಿನ ಅಧಿಕಾರಿಗಳು ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಜೈಲಿಗೆ ಬರುವ ಬಹುತೇಕರಿಗೆ ಅಕ್ಷರ ಜ್ಞಾನವೇ ಇರುವುದಿಲ್ಲ. ಅವರಿಗೆ ತಮ್ಮ ವಿರುದ್ಧ ಏನೆಲ್ಲ ಆರೋಪಗಳನ್ನು ಹೊರಿಸಿ, ಪ್ರಕರಣ ದಾಖಲು ಮಾಡಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿಯೂ ಇರುವುದಿಲ್ಲ. ವಕೀಲರೊಂದಿಗೆ ಸಂವಹನ ಸೇರಿ ಯಾವುದೂ ತಿಳಿದಿರುವುದಿಲ್ಲ. ಆದರೆ ಅಕ್ಷರ ಜ್ಞಾನ ಇದ್ದರೆ ಎ್ಐಆರ್ ಓದಲು, ಇಲ್ಲವೇ ವಕೀಲರು ಸಿದ್ಧಪಡಿಸಿದ ಮಾಹಿತಿಯನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಬಂಧಮುಕ್ತಗೊಂಡ ನಂತರ ಜೀವನದುದ್ದಕ್ಕೂ ಅಕ್ಷರಜ್ಞಾನ ನೆರವಿಗೆ ಬರುತ್ತದೆ ಎನ್ನುವ ಕಾರಣಕ್ಕೆ ಅಕ್ಷರ ಕಲಿಸುವ ಕಾಯಕ ಸದ್ದಿಲ್ಲದೆ ನಡೆದಿದೆ.
ಕಾರಾಗೃಹದಲ್ಲಿ ಕೈದಿಗಳಿಗೆ ಅಕ್ಷರ ಕಲಿಸುವ ಹಾಗೂ ಪುಸ್ತಕ ಓದಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ವರ್ಣಮಾಲೆಯಿಂದಲೇ ಅಕ್ಷರದ ಅಭ್ಯಾಸ ಮಾಡಿಸಲಾಗುತ್ತದೆ. ಜೈಲಿನಲ್ಲಿ ಪ್ರತಿ ದಿನದ ಚಟುವಟಿಕೆಗಳ ಹೊರತಾಗಿ ಬಿಡುವಿನ ಅವಧಿಯಲ್ಲಿ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಇದಕ್ಕೆ ಪೂರಕವಾಗುವಂತೆ ಸುಸಜ್ಜಿತ ಗ್ರಂಥಾಲಯವೂ ಇದ್ದು, ಸಾವಿರಾರು ಪುಸ್ತಕಗಳೂ ಲಭ್ಯವಿವೆ. ಗ್ರಂಥಾಲಯದಲ್ಲಿ ಟೇಬಲ್, ಕುರ್ಚಿ, ್ಯಾನ್ ಸೇರಿ ಇತರ ಸವಲತ್ತು ಕಲ್ಪಿಸಲಾಗಿದೆ. ಇದರ ತೆಗೆ ಜೈಲು ಹಕ್ಕಿಗಳಿಗೆ ಕಲಿಕೆ ಜತೆಗೆ ಬದುಕು ರೂಪಿಸಿಕೊಳ್ಳಲು ಬೇಕಾಗುವ ಕೌಶಲ ತರಬೇತಿಯೂ ಇದ್ದು, ಕೈದಿಯ ಆಸಕ್ತಿಗೆ ಅನುಗುಣವಾಗಿಯೇ ತರಬೇತಿ ನೀಡಲಾಗುತ್ತಿದೆ.
ಇನ್ನು ಅಚ್ಚರಿಯ ವಿಷಯವೆಂದರೆ ಅಕ್ಷರಬಾರದ ಬಂಧಿಗಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿರುವವರೂ ಕೈದಿಯೇ ಎಂದರೆ ಅಚ್ಚರಿ ಪಡಲೇಬೇಕು. ಹೌದು..! ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿರುವ ಉಮೇಶ್ ಎನ್ನುವವರು ಸ್ನಾತಕೋತ್ತರ ಪದವೀಧರರಾಗಿದ್ದು, ಜೈಲು ಹಕ್ಕಿಗಳಿಗೆ ಕಲಿಸುವ ಜವಾಬ್ದಾರಿಯನ್ನು ವಯಸ್ಕರ ಶಿಕ್ಷಣ ಇಲಾಖೆ ಉಮೇಶ್‌ಗೆ ನೀಡಿದೆ. ಇವರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ 2500 ರೂ.ಗಳ ಭತ್ಯೆಯನ್ನೂ ನೀಡುತ್ತದೆ.
ಅಕ್ಷರ ಜ್ಞಾನ ಪಡೆದವರಲ್ಲಿ ಕನ್ನಡಿಗರು ಮಾತ್ರವೇ ಇಲ್ಲ. ಹೊರ ರಾಜ್ಯದವರೂ ಸಹ ಕನ್ನಡ ಅಕ್ಷರಗಳನ್ನು ಕಲಿತಿದ್ದಾರೆ ಎನ್ನುವುದು ಮತ್ತೊಂದು ಕುತೂಹಲ ವಿಷಯ. ವಿವಿಧ ಪ್ರಕರಣಗಳಡಿ ಬಂಧಿಯಾಗಿರುವ ಬಿಹಾರ, ಉತ್ತರ ಪ್ರದೇಶ, ಅಸ್ಸಾಂ ಸೇರಿ ವಿವಿಧ ರಾಜ್ಯಗಳ ಕೈದಿಗಳಿಗೆ ಕನ್ನಡಿಗರೊಂದಿಗೆ ಕನ್ನಡ ಕಲಿಸಲಾಗಿದೆ. ಪರಭಾಷಿಕರೂ ಸಹ ಅಷ್ಟೇ ಉತ್ಸಾಹದಿಂದ ಕನ್ನಡ ಕಲಿತಿದ್ದಾರೆ ಎನ್ನುತ್ತಾರೆ ಜೈಲು ಅಧೀಕ್ಷಕರ ರಾಕೇಶ್ ಕಾಂಬಳೆ.
ಅಧೀಕ್ಷಕರು, ರಾಮನಗರ ಜಿಲ್ಲಾ ಕಾರಾಗೃಹ
ರಾಕೇಶ್ ಕಾಂಬಳೆ
ವಯಸ್ಕರ ಶಿಕ್ಷಣ ಇಲಾಖೆಯಿಂದ ವಾರ್ಷಿಕವಾಗಿ ನೂರಾರು ಮಂದಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಅದರಂತೆ ಕಾರಾಗೃಹದಲ್ಲಿಯೂ ಸಹ ಕೈದಿಗಳಿಗೆ ಅಕ್ಷರ ಕಲಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದ್ದು, ಪ್ರತಿ ವರ್ಷ 30-35 ಮಂದಿ ಅಕ್ಷರ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ.
ಮುನೇಶ್ ಎಂ,
ಜಿಲ್ಲಾ ಅಧಿಕಾರಿ
ವಯಸ್ಕರ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ