

ಚನ್ನಪಟ್ಟಣ: ತಾಲೂಕಿನಲ್ಲಿ ಕೆಲ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಲೋಕೋಪಯೋಗಿ ವಿಶೇಷ ಉಪವಿಭಾಗ ಮುಕ್ತಾಯಗೊಳ್ಳುವುದೇ? ಈ ವಿಭಾಗವನ್ನು ಸ್ಥಳಾಂತರಿಸುವಂತೆ ಅಥವಾ ಮುಕ್ತಾಯಗೊಳಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಸರ್ಕಾರಕ್ಕೆ ಪತ್ರ ಬರೆದಿರುವುದು ಇಂತಹದ್ದೊಂದು ಪ್ರಶ್ನೆ ಮೂಡಿಸಿದೆ.
ಹೌದು. ನಗರದಲ್ಲಿ ಬಿಎಂ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆಯ ವಿಶೇಷ ಉಪವಿಭಾಗವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಅವಶ್ಯವಿರುವ ಕಡೆಗೆ ಸ್ಥಳಾಂತರಿಸುವಂತೆ ಅಥವಾ ಮುಕ್ತಾಯಗೊಳಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಉಪವಿಭಾಗಕ್ಕೆ ಕಾರ್ಯಭಾರ ಒತ್ತಡ ಕಡಿಮೆ ಇರುವ ಕಾರಣ, ಈ ಉಪವಿಭಾಗವನ್ನು ಮುಕ್ತಾಯಗೊಳಿಸುವಂತೆ ಪತ್ರದಲ್ಲಿ ಕೋರಿದ್ದಾರೆ. ಉಪವಿಭಾಗವನ್ನು ತೆರವುಗೊಳಿಸಲು ಶಾಸಕರು ಮುಂದಾಗಿರುವ ವಿಚಾರ ಸದ್ಯ ಹಲವು ಚರ್ಚೆಗೆ ಕಾರಣವಾಗಿದೆ.
ಕುಮಾರಸ್ವಾಮಿ ಅವಧಿಯಲ್ಲಿ ಆರಂಭ!
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರಾಗಿ, ಸಿಎಂ ಆದ ಬಳಿಕ ಸ್ವೇತ್ರಕ್ಕೆ ಸಾಕಷ್ಟು ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೂರಾರು ಕೋಟಿ ಅನುದಾನ ನೀಡಿದ್ದರು. ಹೆಚ್ಚುವರಿ ಅನುದಾನ ಕಾಮಗಾರಿಗಳ ನಿರ್ವಹಣೆಗಾಗಿ 2018ರಲ್ಲಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ವಿಶೇಷ ಉಪವಿಭಾಗ ತೆರೆದಿದ್ದರು. ಅನುದಾನಗಳ ನಿರ್ವಹಣೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಚ್.ಡಿ.ಕುಮಾರಸ್ವಾಮಿ ಈ ವಿಶೇಷ ಉಪವಿಭಾಗ ಆರಂಭಕ್ಕೆ ಆಸಕ್ತಿ ವಹಿಸಿದ್ದರು. ಈ ವಿಭಾಗದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಿರ್ವಹಣೆ ಆಗಿರುವುದನ್ನು ಸ್ಮರಿಸಬಹುದು.
ನಾನಾ ಚರ್ಚೆ ಆರಂಭ?
ಎಚ್ಡಿಕೆ ಅವಧಿಯಲ್ಲಿ ಆರಂಭವಾದ ಈ ವಿಶೇಷ ಉಪವಿಭಾಗವನ್ನು ಮುಚ್ಚಿಸಲು ಶಾಸಕರು ಮುಂದಾಗಲು ಕಾರಣವೇನು? ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಪತ್ರದ ಹಿಂದೆ ರಾಜಕೀಯ ಕಾರಣಗಳಿವೆ ಎಂಬ ಮಾತುಗಳು ಸಹ ಕೇಳಿಬಂದಿವೆ.
ಸಿಪಿವೈ ಸ್ಪಷ್ಟನೆ!
ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ "ವಿಜಯವಾಣಿ'ಗೆ ಸ್ಪಷ್ಟನೆ ನೀಡಿರುವ ಶಾಸಕ ಸಿ.ಪಿ.ಯೋಗೇಶ್ವರ್, ಈ ವಿಚಾರದಲ್ಲಿ ಯಾವ ರಾಜಕೀಯ ಕಾರಣವೂ ಇಲ್ಲ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಈ ಉಪವಿಭಾಗ ಆರಂಭಿಸಿದ್ದರು. ಆದರೆ, ಸದ್ಯ ಈ ಉಪವಿಭಾಗಕ್ಕೆ ಯಾವುದೇ ಕಾರ್ಯಭಾರದ ಒತ್ತಡವಿಲ್ಲ. ಈ ಹಿನ್ನೆಲೆಯಲ್ಲಿ ಇದರ ಅವಶ್ಯಕತೆ ಸದ್ಯಕ್ಕೆ ಇಲ್ಲ. ನಿಷ್ಕ್ರಿಯವಾಗಿರುವ ಈ ಉಪವಿಭಾಗವನ್ನು ಅವಶ್ಯಕತೆ ಇರುವ ಕಡೆಗೆ ಸ್ಥಳಾಂತರಿಸುವಂತೆ ಅಥವಾ ಮುಕ್ತಾಯಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಅಷ್ಟೇ. ಆಡಳಿತಾತ್ಮಕ ದೃಷ್ಟಿಯಿಂದ ಈ ಮನವಿ ಮಾಡಿದ್ದೇನೆ. ಒಂದೇ ಡಿವಿಜನ್ ಇರುವುದು ಎಲ್ಲ ವಿಚಾರದಿಂದಲೂ ಒಳ್ಳೆಯದು ಎಂದು ನಿಲುವು ವ್ಯಕ್ತಪಡಿಸಿದರು.