

ಹಾಸನ: ಪ್ರಜೆಗಳು ಪ್ರಸ್ತುತ ಎಲ್ಲ ರಂಗದಲ್ಲಿಯೂ ಭಾಗವಹಿಸುತ್ತಿರುವುದು ಪ್ರಜಾಪ್ರಭುತ್ವದ ಸಂಕೇತವಾಗಿದ್ದು, ನಾವೆಲ್ಲರೂ ಪ್ರಜಾಪ್ರಭುತ್ವದಡಿ ಜನಪ್ರತಿನಿಧಿಗಳಾಗಿದ್ದೇವೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಕೊಡುಗೆಯಿಂದ ನಾವೆಲ್ಲರೂ ಇಂದು ಸ್ವತಂತ್ರರಾಗಿದ್ದೇವೆ. ಸಂವಿಧಾನ ಪುಸ್ತಕವನ್ನು ಪಡೆದುಕೊಳ್ಳುವುದಷ್ಟೇ ಅಲ್ಲದೆ ಅಂಬೇಡ್ಕರ್ ಅವರ ಅಂಶಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಬೇಕು. ಜತೆಗೆ ಮುಂದಿನ ಪೀಳಿಗೆಗೆ ಅವುಗಳ ಕುರಿತಾಗಿ ಮಾಹಿತಿ ತಿಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಚುನಾವಣೆ ಸಂದರ್ಭದಲ್ಲಿ ರೆಸಾರ್ಟ್, ಹೋಟೆಲ್‌ಗಳಿಗೆ ರಜೆ ನೀಡಬೇಕೆಂದು ಸರ್ಕಾರದಿಂದ ಆದೇಶ ಬರುತ್ತದೆ. ಆದರೆ ಜನರು ರಜೆಯನ್ನು ತೆಗೆದುಕೊಂಡು ಪ್ರವಾಸ ಮಾಡಲು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ಪ್ರಜಾಪ್ರಭುತ್ವ ನಮ್ಮ ದೇಶದ ಜೀವಾಳ. ಅದು ಸಂವಿಧಾನದ ಮೂಲಕ ನಮಗೆ ದೊರೆತಿದೆ. ಪ್ರತಿಯೊಬ್ಬರೂ ಆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತ ಚಲಾಯಿಸಲು ನಿರ್ಲಕ್ಷೃ ಮಾಡಬಾರದು. ಪ್ರಜಾಪ್ರಭುತ್ವ ಸದೃಢವಾಗಬೇಕೆಂದರೆ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಗಿರೀಶ್ ಮಾತನಾಡಿ, ಅಂಬೇಡ್ಕರ್‌ರ ಪ್ರಜಾಪ್ರಭುತ್ವ ಇಂದು ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ವಿಜೃಂಭಿಸುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಸಂವಿಧಾನದ ಪೀಠಿಕೆ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮುದಾಯದ ಮುಖಂಡರಾದ ಸಂದೇಶ್, ಈರಣ್ಣ ಉಪಸ್ಥಿತರಿದ್ದರು.