ಉತ್ತಮ ಸಮಾಜ ನಿರ್ಮಿಸಲು ಶ್ರಮಿಸೋಣ

ಉತ್ತಮ ಸಮಾಜ ನಿರ್ಮಿಸಲು ಶ್ರಮಿಸೋಣ
Published on

ಹಾಸನ: ಕಲಿಕೆಯಿಂದ ಹೊರಗುಳಿದಿರುವ ವರ್ಗದವರನ್ನು ಸಾಕ್ಷರರನ್ನಾಗಿ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಎಂಬ ದೀಪದ ಮೂಲಕ ದಾರಿ ತೋರಿಸಿ ಉತ್ತಮ ಸಮಾಜ ನಿರ್ಮಿಸೋಣ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಹೇಳಿದರು.

ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆವರಣದಲ್ಲಿ ಸಾಕ್ಷರತಾ ಧ್ವಜಾರೋಹಣಾ ನೆರವೇರಿಸಿ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಜಿಲ್ಲೆಯಲ್ಲಿ ಪ್ರತಿಶತ 100ಕ್ಕೆ 100ರಷ್ಟು ಸಾಕ್ಷಾರತೆ ಗುರಿ ತಲುಪಲು ಪ್ರತಿಯೊಬ್ಬರೂ ಪಣ ತೊಡೋಣ ಎಂದು ಹೇಳಿದರು.

ಶಿಕ್ಷಣದಿಂದ ಸ್ವಾಭಿಮಾನ, ಸ್ವಾಭಿಮಾನದಿಂದ ಆತ್ಮಗೌರವ, ಆತ್ಮಗೌರವದಿಂದ ನಿಜಜೀವನಕ್ಕೆ ಅರ್ಥ ಬರುತ್ತದೆ. ಶಿಕ್ಷಣ ಇಲ್ಲದೆ ಬದುಕಬಹುದು, ಆದರೆ ತಮ್ಮಲ್ಲಿರುವ ಪ್ರತಿಭೆಗೆ ಅವಕಾಶವಿರುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, 2027 ರೊಳಗೆ ಇಡೀ ರಾಷ್ಟ್ರದ ಜನತೆಯನ್ನು ಅಕ್ಷರಸ್ಥರನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 173 ಸದಸ್ಯರನ್ನು ಸಾಕ್ಷರರನ್ನಾಗಿ ಮಾಡಲಾಗಿದೆ. ಈ ಸಾಕ್ಷರತಾ ಆಂದೋಲನವು ಪೂರ್ಣ ಫಲಪ್ರದವಾಗಲಿ ಎಂದು ಹೇಳಿದರು.

ಕಲಾವಿದರಾದ ಗ್ಯಾರಂಟಿ ರಾಮಣ್ಣ ಸಾಕ್ಷರತಾ ಗೀತೆಗಳನ್ನು ಹಾಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಾಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ಎಸ್.ಎಸ್. ಪಾಷ, ಎಚ್.ಮೋಹನ್, ಬಿ.ಆರ್. ಉದಯ್ ಕುಮಾರ್, ಡಾ.ಬಷೀರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net